ಬದಿಯಡ್ಕ: ಸ್ತ್ರೀಯರನ್ನು ಕೇಂದ್ರೀಕರಿಸಿ ಅವರ ಕಷ್ಟ, ಸುಖಗಳಿಗೆ ಸ್ಪಂದಿಸುವ ರಚನೆಗಳನ್ನು ಕಥಾನಾಯಕಿ ಕೃತಿಯಲ್ಲಿ ಕಾಣಬಹುದು. ಇಲ್ಲೆಲ್ಲ ಸರಳತೆ, ಸ್ಪಷ್ಟತೆ ಇದೆ. ಹೇಳಬೇಕಾದುದನ್ನು ನೇರವಾಗಿಯೇ ಹೇಳಿಬಿಡುವ ನಯಗಾರಿಕೆ ಕೃತಿಯ ವೈಶಿಷ್ಟ್ಯತೆಯಾಗಿದೆ ಎಂದು ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಸಾಹಿತಿ ಡಾ. ಹರಿಕೃಷ್ಣ ಭರಣ್ಯ ಹೇಳಿದರು.
ವಿಜಯಲಕ್ಷ್ಮಿ ಕಟ್ಟದಮೂಲೆ ಅವರ ಚೊಚ್ಚಲ ಕೃತಿ ಕಥಾನಾಯಕಿ ಕಥಾಸಂಕಲನವನ್ನು ಲೇಖಕಿಯ ಸ್ವಗೃಹ ಕಟ್ಟದಮೂಲೆ 'ನರಹರಿನಿಲಯ'ದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿಂದೆ ಮಹಿಳಾ ಸಾಹಿತಿಗಳ ಬರಹಗಳನ್ನು ಪ್ರತ್ಯೇಕವಾಗಿ ನೋಡುವ ಪರಿಪಾಠವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಮಹಿಳೆಯರೂ ಪುರುಷರಷ್ಟೇ ಸಮರ್ಥವಾಗಿ ಬರೆಯಬಲ್ಲರು ಎಂಬುದು ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಹಿತಿ,ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ ಗೋಪಾಲಕೃಷ್ಣ ಭಟ್ ಅವರು ಕೃತಿಯನ್ನು ಪರಿಚಯಿಸಿ ಮಾತನಾಡಿದರು. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನದವರು ಪ್ರಕಟಿಸಿರುವ ಈ ಕೃತಿಯಲ್ಲಿ ಭಾರತೀಯ ಸಂಸ್ಕøತಿ ಪ್ರತಿಬಿಂಬಿತವಾಗಿದೆ. ಸೂಕ್ತ ಪದಗಳ ಬಳಕೆಯಾಗಿದೆ. ಅದ್ಭುತ,ರಮ್ಯ ವಿಚಾರಧಾರೆಯಿದೆ ಎಂದರು. ವಿಜಯಲಕ್ಷ್ಮಿಯವರು ಭರವಸೆಯ ಕಥೆಗಾರ್ತಿಯಾಗಿ ಮೂಡಿಬಂದಿದ್ದಾರೆ ಎಂದು ಹೇಳಿದರು.
ಸಾಹಿತಿ,ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಶುಭಾಶಂಸನೆಗೈದರು. ಲೇಖಕಿ ತನ್ನ ಮನದಾಳದ ಮಾತುಗಳನ್ನಾಡಿದರು. ಸಾಮಾನ್ಯ ಗೃಹಿಣಿಯಾದ ತಾನು ಕಥೆಗಾರ್ತಿಯಾಗಿ ಬೆಳೆದು ಬಂದ ಪರಿಯನ್ನು ವಿವರಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ ಹಿರಿಯ ವಿದ್ವಾಂಸ,ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಮಾತನಾಡಿ, ಸಾಹಿತ್ಯ ನಮಗೆ ಬೇಕಾದ ನಿತ್ಯ ಕೈದೀವಿಗೆ. ಭಾಷೆ, ಸಂಸ್ಕಾರಗಳು ಸಾಹಿತಿಗಳಿಗೆ ಅಗತ್ಯ ಎಂದರು. ಪುಸ್ತಕ ಪ್ರಕಾಶನದ ಬಗ್ಗೆ ಕೆಲವು ಕಿವಿಮಾತುಗಳನ್ನು ಹೇಳಿದರು.
ಶ್ರದ್ಧಾ, ಸಮನ್ಯು, ಸುದರ್ಶನ ಮಾಣಿಪ್ಪಾಡಿ, ವಿಜಯಲಕ್ಷ್ಮಿ ಮೊದಲಾದವರು ಗೀತೆಗಳನ್ನು ಹಾಡಿದರು. ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಹಾಸ್ಯರಸಾಯನದ ಮೂಲಕ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು. ನರೇಶ ಕಟ್ಟದಮೂಲೆ ಸ್ವಾಗತಿಸಿ, ಕೆ.ನರಸಿಂಹ ಭಟ್ ಏತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುಖ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.





