ಕಾಸರಗೋಡು: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಕಾಸರಗೋಡು ನಗರಸಭೆ ವಿಶೇಷ ಅಧಿವೇಶನದ ಮೂಲಕ ಗೊತ್ತುವಳಿ ಮಂಡಿಸಿದ್ದು, ಬಿಜೆಪಿ ಸದಸ್ಯರು ತೀವ್ರವಾಗಿ ಪ್ರತಿಭಟನೆಯೊಡ್ಡಿದರು. ಪೌರತ್ವ ತಿದ್ದುಪಡಿ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಸಿಪಿಎಂ ಸದಸ್ಯ ದಿನೇಶ್ ಚೆನ್ನಿಕರ ಗೊತ್ತುವಳಿ ಮಂಡಿಸಿದ್ದು, ಇದಕ್ಕೆ ಆಡಳಿತ ಮುಸ್ಲಿಂಲೀಗ್ ಬೆಂಬಲ ಸೂಚಿಸಿತ್ತು.
ಈ ಸಂದರ್ಭ ಬಿಜೆಪಿ ಸದಸ್ಯರು 'ವೀ ಸಪ್ಪೋರ್ಟ್ ಸಿಎಎ' ಎಂದು ನಮೂದಿಸಿದ ಭಿತ್ತಿಪತ್ರ ಪ್ರದರ್ಶಿಸಿ ಅಧ್ಯಕ್ಷರ ಚೇಂಬರ್‍ನತ್ತ ತೆರಳಿ ಘೋಷಣೆ ಮೊಳಗಿಸಿದರು. ಈ ಸಂದರ್ಭ ಆಡಳಿತ ಪಕ್ಷದ ಸದಸ್ಯರೂ ಗೊತ್ತುವಳಿ ಬೆಂಬಲಿಸಿ ಅಧ್ಯಕ್ಷರ ವೇದಿಕೆ ಬಳಿ ಆಗಮಿಸಿದಾಗ ಬಿಗುವಿನ ವಾತಾವರಣ ಮೂಡಿಬಂದಿತ್ತು. ಬಿಜೆಪಿ ಸದಸ್ಯರು ಭಾರತ್ ಮಾತಾ ಕಿ ಜೈ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಿ ಜೈ ಘೋಷಣೆ ಮೊಳಗಿಸಿ, ಗೊತ್ತುವಳಿಯ ಪತ್ರವನ್ನು ಸದನದಲ್ಲೇ ಹರಿದುಹಾಕಿ ಪ್ರತಿಭಟಿಸಿದರು. ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಗೊತ್ತುವಳಿಗೆ ಅಂಗೀಕಾರ ನೀಡಲಾಯಿತು. ಬಹುಮತದೊಂದಿಗೆ ಗೊತ್ತುವಳಿ ಅಂಗೀಕಾರಗೊಂಡಿರುವುದಾಗಿ ನಗರಸಭಾಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಘೋಷಿಸಿದರು.
ಬಿಜೆಪಿ ಸದಸ್ಯರು ಘೋಷಣೆ ಮೊಳಗಿಸಿ ಪ್ಲೇಕಾರ್ಡಿನೊಂದಿಗೆ ಸಭೆಯಿಂದ ಹೊರನಡೆದರು. ಸವಿತಾ ಟೀಚರ್, ಮನೋಹರ್ ಮುಂತಾದವರು ನೇತೃತ್ವ ನೀಡಿದರು. ಈ ಸಂದರ್ಭ ಆಡಳಿತ ಪಕ್ಷದ ಬೆಂಬಲಿಗರು ಸಿಎಎ ಗೊತ್ತುವಳಿಗೆ ಬೆಂಬಲ ಸೂಚಿಸಿ ನಗರಸಭಾಂಗಣ ಎದುರು ಅಭಿನಂದನೆ ಸಲ್ಲಿಸಿ ಘೋಷಣೆ ಮೊಳಗಿಸಿದರು.




