ಕಾಸರಗೋಡು: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇರಳ-ಕರ್ನಾಟಕ ಗಡಿ ಪ್ರದೇಶಗಳ 12 ಗಡಿಭಾಗಗಳ ರಸ್ತೆಗಳನ್ನು ಮುಚ್ಚುಗಡೆ ಮಾಡಲಾಗಿದೆ. 5 ಗಡಿರಸ್ತೆಗಳಲ್ಲಿ ಕಠಿಣ ಸುರಕ್ಷಾ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಮಂಜೇಶ್ವರದ ತೂಮಿನಾಡುರಸ್ತೆ, ಕೆಂಬಾಡಿ-ಪದವು ರಸ್ತೆ, ಸುಂಕದಕಟ್ಟೆ-ಮುಡಿಪು ರಸ್ತೆ, ಕುರುಡಪದವು ರಸ್ತೆ,ಮುಳಿಗದ್ದೆ ರಸ್ತೆ, ಬೆರಿಪದವು ರಸ್ತೆ, ಬದಿಯಡ್ಕದ ಸ್ವರ್ಗ-ಆರ್ಲಪದವು ರಸ್ತೆ, ಆದೂರಿನ ಕೊಟ್ಯಾಡಿ ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಬೇಡಡ್ಕದ ಚೆನ್ನಂಗೋಡು-ಚಾಮಕೊಚ್ಚಿ ರಸ್ತೆಗಳನ್ನು ಪೂರ್ಣರೂಪದಲ್ಲಿ ಮುಚ್ಚುಗಡೆ ಮಾಡಲಾಗಿದೆ. ತಲಪ್ಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕಸ್ಥಳ-ಅಡ್ಯನಡ್ಕ ರಸ್ತೆ, ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯಹೆದ್ದಾರಿ, ಮಾಣಿಮೂಲೆ-ಸುಳ್ಯ ರಸ್ತೆ, ಪಾಣತ್ತೂರು-ಚೆಂಬೇರಿ-ಮಡಿಕೇರಿ ರಸ್ತೆಗಳಲ್ಲಿ ಕಡ್ಡಾಯ ಸುರಕ್ಷೆ, ತಪಾಸಣೆ ಏರ್ಪಡಿಸಲಾಗಿದೆ. ವೈದ್ಯರು, ಜ್ಯೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್, ಆರೋಗ್ಯ ಇಲಾಖೆ ಕಾರ್ಯಕರ್ತರು, ಪೆÇಲೀಸರು ಒಳಗೊಂಡಿರುವ ತಂಡ ತಪಾಸಣೆಗೆ ನೇತೃತ್ವ ನೀಡುತ್ತಿದೆ. ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಮಿಳ್ನಾಡು ಸರ್ಕಾರವೂ ಕೇರಳದಿಂದ ತಮಿಳ್ನಾಡಿಗೆ ತೆರಳುವ ವಾಹನಗಳಿಗೆ ತಡೆಯೊಡ್ಡಿದೆ. ಈ ಹಿನ್ನೆಲೆಯಲ್ಲಿ ಕೊಯಂಬತ್ತೂರ್ ಗಡಿ ಹಂಚಿಕೊಂಡಿರುವ ಕೇರಳದ ಎಲ್ಲ ರಸ್ತೆಗಳಲ್ಲೂ ತಮಿಳ್ನಾಡಿನ ಅಧಿಕಾರಿಗಳು ಸ್ಥಳದಲ್ಲಿದ್ದು, ವಾಹನ ತಡೆಯುತ್ತಿದ್ದಾರೆ.


