ತಿರುವನಂತಪುರ: ಕೇರಳದಲ್ಲಿ ಒಟ್ಟು 12ಮಂದಿ ಶಂಕಿತ ಕರೊನಾ ಪೀಡಿತರನ್ನು ಪತ್ತಹಚ್ಚಲಾಗಿದ್ದು, ಇವರಲ್ಲಿ ನಾಲ್ಕು ಮಂದಿ ಇಟೆಲಿಯಿಂದ ಆಗಮಿಸಿದವರು ಹಾಗೂ ಇತರ ಎಂಟು ಮಂದಿ ಇವರೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1116ಮಂದಿಯ ಮೇಲೆ ನಿಗಾಯಿರಿಸಲಾಗಿದ್ದು, ಇವರಲ್ಲಿ 967ಮಂದಿ ಮನೆಗಳಲ್ಲಿ ಹಾಗೂ 149ಮಂದಿ ಆಸ್ಪತ್ರೆಗಳಲ್ಲೂ ಇದ್ದಾರೆ. ಶಂಕಿತ 807ಮಂದಿಯ ರಕ್ತದ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, ಇವರಲ್ಲಿ 717ಮಂದಿಯ ಮಾದರಿ ಋಣಾತ್ಮಕವಾಗಿದೆ. ಉಳಿದವರ ಫಲಿತಾಂಶ ಇನ್ನಷ್ಟೆ ಬರಬೇಕಾಗಿದೆ. ಕೊರನಾ ಬಗ್ಗೆ ಸರ್ಕಾರ ಜಾಗ್ರತೆಯ ಹೆಜ್ಜೆಯಿರುಸುತ್ತಿದ್ದು, ಇದಕ್ಕಾಗಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿರುವುದಾಗಿ ಮುಖ್ಯಮಂತ್ರಿ ಪಿಣರಾಯ ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಂದರಿಂದ ಏಳನೇ ತರಗತಿ ವರೆಗೆ ಮಾ. 31ರ ವರೆಗೆ ರಜೆಸಾರಲಾಗಿದ್ದು, 7ರಿಂದ ಮೇಲಿನ ಎಲ್ಲ ತರಗತಿಗಳ ಪರೀಕ್ಷೆ ಯಥಾ ಪ್ರಕಾರ ನಡೆಯಲಿರುವುದಾಗಿ ತಿಳಿಸಿದ್ದಾರೆ.
ವಿವಿಧ ಬೇಡಿಕೆ ಮುಂದಿರಿಸಿ ಮಾ 11ರಿಂದ ನಡೆಸಲುದ್ದೇಶಿಸಿದ್ದ ಖಾಸಗಿ ಬಸ್ ಮುಷ್ಕರವನ್ನೂ ಕೈಬಿಡಲಾಗಿದೆ. ಚಿತ್ರಮಂದಿರಗಳೂ ಮುಚ್ಚಿಕೊಳ್ಳಲಿದೆ.
ಶಬರಿಮಲೆಗೂ ಕರೊನಾ ಬಿಸಿ:
ಕರೊನಾ ವಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಮಾಸಿಕಪೂಜೆಗಾಗಿ ಭಕ್ತಾದಿಗಳು ಭೇಟಿ ನೀಡದಂತೆ ದೇವಸ್ವಂ ಬೋರ್ಡ್ ಮನವಿ ಮಾಡಿದೆ. ದೇವಸ್ವಂ ಬೋರ್ಡಿನಮನವಿಯನ್ನು ಭಕ್ತಾದಿಗಳು ಪಾಲಿಸಿ, ಶಬರಿಮಲೆ ಯಾತ್ರೆಗೆ ಮುಂದೊಂದು ದಿನ ನಿಗದಿಪಡಿಸಿ ಆಗಮಿಸುವಂತೆ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್. ವಾಸು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದರೆ. ಹೆಚ್ಚಿನ ಜಾಗ್ರತೆಯೊಂದಿಗೆ ಹೆಜ್ಜೆಯಿರಿಸಬೇಕಾದ ಕಾಲಘಟ್ಟ ಇದಾಗಿದ್ದು, ಭಕ್ತಜನತೆ ತಮ್ಮೊಂದಿಗೆ ಸಹಕರಿಸಬೇಕು. ಇದಕ್ಕಾಗಿ ತಿರುವಾಂಕೂರು ದೇವಸ್ವಂ ಬೋರ್ಡ್ ಪ್ರತ್ಯೇಕ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಮಾಸಿಕಪೂಜೆಗಾಗಿ ಶಬರಿಮಲೆಯಲ್ಲಿ ಮಾರ್ಚ್ 13ರಂದು ಗರ್ಭಗುಡಿ ಬಾಗಿಲು ತೆರೆದುಕೊಳ್ಳಲಿದ್ದು, ನೈಮಿತ್ತಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿರುವುದಾಗಿ ಬೋರ್ಡ್ ಪ್ರಕಟಣೆ ತಿಳಿಸಿದೆ.

