ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡು ಬರುತ್ತಿದ್ದ ಕೇರಳ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಕರ್ನಾಟದಲ್ಲಿ ಮತ್ತೆ 5 ಹೊಸ ಪ್ರಕರಣಗಳು ಕಂಡು ಬಂದಿದೆ. ಇದರಂತೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಮತ್ತು ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ.
ಕೇರಳದ ಎರ್ನಾಕುಳಂ ಜಿಲ್ಲೆಯ ಚುಳ್ಳಿಕ್ಕಾಲ್ ಪ್ರದೇಶದಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಪ್ರಸ್ತುತ ಮೃತಪಟ್ಟಿರುವ ವ್ಯಕ್ತಿ ಮಾರ್ಚ್ 16 ರಂದು ದುಬೈನಿಂದ ಕೇರಳ ರಾಜ್ಯಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ. ದುಬೈನಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ಆರಂಭದಲ್ಲಿ ವೈರಸ್'ನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದಾದ ಕೆಲವೇ ದಿನಗಳ ಬಳಿಕ ವ್ಯಕ್ತಿಯನ್ನು ಎರ್ನಾಕುಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾರ್ಚ್ 22 ರಂದು ಪ್ರತ್ಯೇಕ ಕೊಠಡಿಯಲ್ಲಿಸಲಾಗಿತ್ತು. ಮೃತ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆ ಹಾಗೂ ರಕ್ತದ ಒತ್ತಡ ಇತ್ತು ಎಂಬು ವೈದ್ಯಕೀಯ ವರದಿಗಳಿಂತ ತಿಳಿದುಬಂದಿದೆ. ಇದೀಗ ವ್ಯಕ್ತಿಯ 56 ವರ್ಷದ ಪತ್ನಿಯಲ್ಲೂ ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಕರ್ನಾಟಕದಲ್ಲಿ ಐದು ಹೊಸ ಪ್ರಕರಣಗಳು ಹಾಗೂ ತಮಿಳುನಾಡು ರಾಜ್ಯದಲ್ಲಿ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 873ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ಗೌರಿಬಿದನೂರಿನಲ್ಲಿ ಶನಿವಾರ ಮತ್ತೆ ಐವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿದೆ. ಮಾರ್ಚ್ 24ರಂದು 70 ವರ್ಷ ಪ್ರಾಯದ ವೃದ್ಧೆಯೊಬ್ಬರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಬಳಿಕ ಅವರಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತ್ತು. ಕೋವಿಡ್ 19 ಸೋಂಕು ದೃಢಪಟ್ಟ ಮೂವರನ್ನು ಸಂಪರ್ಕಿಸಿದ ಒಟ್ಟು 22 ಮಂದಿಯನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಈ ಪೈಕಿ ಐವರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ. ಸೋಂಕಿತರೆಲ್ಲರನ್ನೂ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪ್ರತ್ಯೇಕ ವಾರ್ಡ್‍ಗಳಿಗೆ ಸ್ಥಳಾಂತರಿಸಲಾಗಿದೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ ವೃದ್ಧ ಮಹಿಳೆ ತನ್ನ ಮಗನನ್ನು ನೋಡಲು ಗೌರಿಬಿದನೂರಿಗೆ ಬಂದಿದ್ದರು. ಅನಾರೋಗ್ಯಕ್ಕೆ ಒಳಗಾದ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ನಂತರ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳ ಆಸ್ಪತ್ರೆ (ಆರ್‍ಜಿಐಸಿಡಿ)ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದರು. ಅವರಲ್ಲಿ ಇಬ್ಬರು ಆರ್‍ಜಿಐಸಿಡಿಯಲ್ಲಿ ಚೇತರಿಸಿಕೊಳ್ಳುತ್ತಿದ್ದರೆ, ಮೂರನೆಯವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


