ಕಾಸರಗೋಡು: ಕೊರೊನಾ ವ್ಯಾಪಿಸುತ್ತಿರುವಂತೆ ರಾಜ್ಯದಲ್ಲಿ ಭೀತಿ ಆವರಿಸಿದ್ದು ಜನಜೀವನ ಸಂಕಷ್ಟಕ್ಕೀಡಾಗಿರುವ ಹಾಗು ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ 20,000 ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.
ಇದರಂತೆ ಬಿಪಿಎಲ್ ಮತ್ತು ಎಪಿಎಲ್ ಎಂಬೀ ವ್ಯತ್ಯಾಸವಿಲ್ಲದೆ ಎಲ್ಲಾ ಕುಟುಂಬಗಳಿಗೂ ಒಂದು ತಿಂಗಳ ರೇಶನ್ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗುವುದು. ಎರಡು ತಿಂಗಳ ವೃದ್ಧಾಪ್ಯ ಇತ್ಯಾದಿ ಸಾಮಾಜಿಕ ಪಿಂಚಣಿಯನ್ನು ಈ ತಿಂಗಳಲ್ಲೇ ವಿತರಿಸಲಾಗುವುದು. ಪಿಂಚಣಿ ಲಭಿಸದ ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ 1000 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಲಾಗಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳ ಹೊರತುಪಡಿಸಿ ಇತರರಿಗೆ ತಲಾ 10 ಕಿಲೋ ಅಕ್ಕಿ ಮತ್ತು ಗೋ„ ಅಗತ್ಯವಿರುವವರಿಗೆ ನೀಡಲಾಗುವುದು. ಇದಕ್ಕಾಗಿ 100 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೊರೊನಾ ರೋಗ ಪ್ರತಿರೋಧ ಚಿಕಿತ್ಸಾ ಆರೋಗ್ಯ ಪ್ಯಾಕೇಜ್‍ಗಾಗಿ 500 ಕೋಟಿ ರೂ. ಮೀಸಲಿರಿಸಲಾಗಿದೆ.
ಆಟೋ ಟ್ಯಾಕ್ಸಿ ಫಿಟ್‍ನೆಸ್ ಚಾರ್ಜ್‍ನಲ್ಲಿ ರಿಯಾಯಿತಿ ನೀಡಲಾಗುವುದು. ಸ್ಟೇಜ್ ಕ್ಯಾರಿಯರ್‍ಗಳಿಗೂ ಇದೇ ರೀತಿಯ ರಿಯಾಯಿತಿ ನೀಡಲಾಗುವುದು. ಇದಕ್ಕಾಗಿ 23.60 ಕೋಟಿ ರೂ. ಬೇಕಾಗಿ ಬರಲಿದೆ. ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ಲನ್ನು ದಂಡ ರಹಿತವಾಗಿ ಪಾವತಿಸಲು ಒಂದು ತಿಂಗಳ ಅವಕಾಶ ನೀಡಲಾಗುವುದು. ಸಿನಿಮಾ ಟಾಕೀಸುಗಳಿಗೆ ಮನರಂಜನಾ ತೆರಿಗೆಯಲ್ಲಿ ರಿಯಾಯಿತಿ ನೀಡಲಾಗುವುದು. ಕುಟುಂಬಶ್ರೀ ಮೂಲಕ ಅಗತ್ಯವಿರುವವರಿಗೆ ಸಾಲ ನೀಡಲು 2000 ಕೋಟಿ ರೂ. ಪ್ಯಾಕೇಜ್‍ನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಎಪ್ರಿಲ್, ಮೇ ತಿಂಗಳಲ್ಲಿ ತಲಾ 1000 ಕೋಟಿ ರೂ. ನಂತೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಲಾಗುವುದು. ವ್ಯಕ್ತಿಗಳು, ಕುಟುಂಬಗಳು ಮತ್ತು ಗುತ್ತಿಗೆದಾರರಿಗೆ ನೀಡಲು ಬಾಕಿ ಇರುವ 14000 ಕೋಟಿ ರೂ.ವನ್ನು ಶೀಘ್ರ ವಿತರಿಸಲಾಗುವುದು. ಅದಕ್ಕಿರುವ ಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


