ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮೂರು ಮಂದಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ 19 ಮಂದಿಗೆ ಕೊರೊನಾ ಬಾಧೆ ದೃಢವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೊರೊನಾ ಬಾಧಿತರ ಸಂಖ್ಯೆ 47 ಕ್ಕೇರಿದೆ. ರಾಜ್ಯದಲ್ಲಿ ಇದು ವರೆಗೆ 138 ಮಂದಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಇವರಲ್ಲಿ 126 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಪ್ರಥಮವಾಗಿ ಒಬ್ಬರಿಗೆ ಕೊರೊನಾ ಸೋಂಕು ಬಾಧಿಸಿದೆ. ಕಣ್ಣೂರು ಜಿಲ್ಲೆಯಲ್ಲಿ 9, ಮಲಪ್ಪುರ ಜಿಲ್ಲೆಯಲ್ಲಿ 3, ತೃಶ್ಶೂರು ಜಿಲ್ಲೆಯಲ್ಲಿ 2, ಇಡುಕ್ಕಿ ಜಿಲ್ಲೆಯಲ್ಲಿ 1 ಎಂಬಂತೆ ಗುರುವಾರ ಕೊರೊನಾ ದೃಢೀಕರಿಸಲಾಗಿದೆ.
ಎರ್ನಾಕುಳಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕಣ್ಣೂರು ನಿವಾಸಿಗಳೂ, ಇಬ್ಬರು ವಿದೇಶಿ ಪೌರರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪತ್ತನಂತಿಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರ ಸ್ಯಾಂಪಲ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಒಟ್ಟು ರಾಜ್ಯದಲ್ಲಿ 1,20,003 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 101402 ಮಂದಿ ಮನೆಗಳಲ್ಲೂ, 601 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ ಮಾತ್ರ 136 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, 1342 ಮಂದಿ ಸ್ಯಾಂಪಲ್ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ 4798 ಮಂದಿ ನಿಗಾದಲ್ಲಿ :
ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ 47 ಕ್ಕೇರಿದ್ದು, 4798 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 100 ಮಂದಿ ಆಸ್ಪತ್ರೆಗಳಲ್ಲೂ, 4698 ಮಂದಿ ಅವರವರ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಮಾ.26 ರಂದು ಐದು ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಕೊರೊನಾ ಬಾಧಿಸಿದ ವ್ಯಕ್ತಿಗಳು 37 ರ ಹರೆಯದ ಚೆಂಗಳ ನಿವಾಸಿ, 38 ವರ್ಷ ಪ್ರಾಯದ ಅಣಂಗೂರು ಕೊಲ್ಲಂಪಾಡಿ ನಿವಾಸಿ ಮತ್ತು 26 ವರ್ಷ ಪ್ರಾಯದ ಉಳ್ಳತ್ತಡ್ಕ ನಿವಾಸಿಯಾಗಿದ್ದಾರೆ. ಇದರಲ್ಲಿ ಚೆಂಗಳ ನಿವಾಸಿ ಮಾರ್ಚ್ 21 ರಂದ ಕೋವಿಡ್ 19 ದೃಢೀಕರಿಸಿದ್ದ ದುಬೈಯಿಂದ ಬಂದ ವ್ಯಕ್ತಿಯನ್ನು ಕಲ್ಲಿಕೋಟೆ ಕರಿಪೂರ್ ವಿಮಾನ ನಿಲ್ದಾಣದಿಂದ ವಾಹನದಲ್ಲಿ ಕರೆದುಕೊಂಡ ಬಂದ ವ್ಯಕ್ತಿಯಾಗಿದ್ದಾರೆ. ಕೊಲ್ಲಂಪಾಡಿ, ಉಳ್ಳತ್ತಡ್ಕ ನಿವಾಸಿಗಳು ಮಾರ್ಚ್ 21 ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಖಾಸಗಿ ವಾಹನದಲ್ಲಿ ಕಾಸರಗೋಡಿಗೆ ತಲುಪಿದ್ದರೆಂದು ಡಿಎಂಒ ಡಾ.ಎ.ವಿ.ರಾಂದಾಸ್ ಹೇಳಿದ್ದಾರೆ.
ರಾಜ್ಯದಲ್ಲಿ ಕಮ್ಯೂನಿಟಿ ಕಿಚ್ಚನ್ ಯೋಜನೆಯನ್ನು ಆರಂಭಿಸಲಾಗಿದೆ ಎಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 84 ಮುನ್ಸಿಪಾಲಿಟಿಗಳಲ್ಲಿ ಸೌಕರ್ಯ ಕಲ್ಪಿಸಲಾಗಿದೆ. ಆಹಾರ ವಿತರಣೆ ಶೀಘ್ರ ಆರಂಭಿಸಲಾಗುವುದು. ಕ್ಷೇಮ ಪಿಂಚಣಿ ಮಾ.27 ರಿಂದ ವಿತರಣೆ ಆರಂಭಿಸಲಾಗುವುದು. ರೇಶನ್ ಕಾರ್ಡ್ ಇಲ್ಲದವರಿಗೂ ಆಹಾರ ಸಾಮಾಗ್ರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ಸ್ವಾಗತಾರ್ಹ ಎಂದರು. ರಾಜ್ಯದಲ್ಲಿ 236000 ಮಂದಿಯ ಸ್ವಯಂ ಸೇವಕರ ಸೇನೆಯನ್ನು ಶೀಘ್ರವೇ ರಚಿಸಲಾಗುವುದು. 22-40 ವರ್ಷ ಪ್ರಾಯದ ಮಧ್ಯೆ ಇರುವ ಮಂದಿಗೆ ಆನ್‍ಲೈನ್ ಮೂಲಕ ರಿಜಿಸ್ಟರ್ ಮಾಡಬಹುದು. ಪಂಚಾಯತ್‍ಗಳಲ್ಲಿ 200 ಮಂದಿಯ ಹಾಗು ನಗರಸಭೆಗಳಲ್ಲಿ 500 ಮಂದಿಯ ಸೇನೆಯನ್ನು ರಚಿಸಲಾಗುವುದು. ಇವರಿಗೆ ಗುರುತು ಚೀಟಿ ನೀಡಲಾಗುವುದು. ಇವರ ಪ್ರಯಾಣ ವೆಚ್ಚವನ್ನು ಸ್ಥಳೀಯಾಡಳಿತ ಸಂಸ್ಥೆಗಳು ವಹಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


