ಕಾಸರಗೋಡು: ಮಹಾಮಾರಿ ಕೊರೊನಾ ಬಗ್ಗೆ ತಲೆದೋರಿರುವ ಭೀತಿಯ ಪ್ರತಿರೋಧಕ್ಕೆ ಸಾರ್ವಜನಿಕ ಮಾನಸಿಕ ದೃಢತೆ ಅಗತ್ಯ ಎಂದು ಮೆಂಟಲ್ ಹೆಲ್ತ್ ನೋಡೆಲ್ ಅಧಿಕಾರಿ ಡಾ.ಸನ್ನಿ ಮ್ಯಾಥ್ಯೂ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭ ಸಾರ್ವಜನಿಕರು ಆತಂಕಕ್ಕೀಡಾಗುವುದು ಸಹಜ. ಜೊತಗೆ ಕೆಲವು ತಪ್ಪು ಭಾವನೆಗಳು, ಹುಸಿ ಮಾಹಿತಿಗಳು ಇತ್ಯಾದಿ ಸಮಾಜದ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದವರು ಅನಿಸಿಕೆ ವ್ಯಕ್ತಪಡಿಸುತ್ತಾರೆ. ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಕೊರೊನಾ ನಿಯಂತ್ರಣ ಘಟಕದಲ್ಲಿ ಕೊರೊನಾ ಭೀತಿ ಸಂಬಂಧ ಕೌನ್ಸಿಲಿಂಗ್ ಮತ್ತು ಸಲಹೆಗಾಗಿ ದೂರವಾಣಿ ಕರೆ ಮಾಡುತ್ತಿರುವವ ಸಂಖ್ಯೆ ದಿನಂದಿಂದ ದಿನಕ್ಕೆ ಹೆಚ್ಚುತ್ತಿದೆ.
ಆದರೆ ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಕೊರೊನಾ ಸೋಂಕು ಮೂಲಕ ಬರುವ ಜ್ವರ ಕೇವಲ ವೈರಲ್ ಜ್ವರ. ವೈದ್ಯರ ಸಲಹೆ-ಸೂಚನೆ ಪಡೆದು ಪರಿಪೂರ್ಣ ರೀತಿಯಲ್ಲಿ ಶುಶ್ರೂಷೆ, ಔಷಧ, ವಿಶ್ರಾಂತಿ ಪಡೆದರೆ ಗುಣಮುಖವಾಗುವ ಅಸೌಖ್ಯವೇ ಇದು. ರೋಗಬಾಧಿತರೊಂದಿಗೆ ಯಾವುದೇ ರೀತಿ ಸಂಪರ್ಕ ಇರಿಸದಂತೆ ಸಂಬಂಧಿಕರು, ಆಪ್ತರೂ ಗಮನಿಸಬೇಕು.
ಆರೋಗ್ಯ ಇಲಾಖೆ ನೀಡಿರುವ ಸಲಹೆ-ಸೂಚನೆ ಕಡ್ಡಾಯವಾಗಿ ಪಾಲಿಸಿ, ಎಲ್ಲರೂ ಮನೆಗಳಲ್ಲೇ ಉಳಿದರೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯ ಎಂದವರು ತಿಳಿಸಿದರು.
ಇಂಥಾ ಒಂದು ಪರಿಸ್ಥಿತಿಯನ್ನು ಎದುರಿಸುತ್ತಿರುವವರಲ್ಲಿ ಬಹುತೇಕ ಮಂದಿಗೆ ಇದು ಹೊಸ ಅನುಭವವಾಗಿದೆ. ಹೀಗಾಗಿ ಮೊದಲ ಹಂತದ ದಿನಗಳಲ್ಲಿ ಮಾನಸಿಕ ಒತ್ತಡ, ಸಂಕಷ್ಟ ತಲೆದೋರಬಹುದು. ಈ ವೇಳೆ ತಮಗೆ ಪ್ರಿಯವಾದ ವಿಚಾರಗಳನ್ನು ನಡೆಸುತ್ತಾ(ಸಂಗೀತ ಕೇಳುವುದು ಇತ್ಯಾದಿ) ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದವರು ಸಲಹೆ ಮಾಡಿದ್ದಾರೆ.
ಹೀಗೆ ಮಾಡಿರಿ : ಸಾಮಾಜಿಕ ಮಧ್ಯಮಗಳಲ್ಲಿ ಕೋವಿಡ್-19 ಸಂಬಂಧ ಕೆಲವು ತಪ್ಪು ಮಾಹಿತಿಗಳು ಹರಡುತ್ತಿದ್ದು, ಇವನ್ನು ಕಂಡು ನಂಬಬಾರದು. ಸರಿಯಾ ಮಾಹಿತಿ ತಿಳಿಯುವ ಮೂಲಕ ಸಂಶಯಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ದಿಶಾ ಸಂಸ್ಥೆಯ ಟಾಲ್‍ಫ್ರೀ ನಂಬ್ರ: 1056ನ್ನು ಸಂಪರ್ಕಿಸಬಹುದು.
ಮನೆಯಲ್ಲಿ ಹೆತ್ತವರ, ಮಕ್ಕಳ ಮುಂದೆ ರೋಗ ಹರಡುವಿಕೆ ಸಂಬಂಧ ಭೀತಿ ಮೂಡಿಸುವ ಸುದ್ದಿಗಳನ್ನು ಚರ್ಚಿಸಬೇಡಿ. ಇಂದಿನ ದುಸ್ಥಿತಿ ಕೇವಲ ತಾತ್ಕಾಲಿಕ. ಇದನ್ನು ಶೀಘ್ರದಲ್ಲೇ ಪರಿಹರಿಸಿಕೊಂಡು ಸಮಾಜ ಹಿಂದಿನಂತೆಯೇ ಸುಧಾರಿತಗೊಳ್ಳಲಿದೆ ಎಂಬ ಶುಭ ವಿಶ್ವಾಸ ಅವರಲ್ಲಿ ಮೂಡಿಸಬೇಕು. ಉತ್ತಮ ಮುಂಜಾಗರೂಕತೆ, ರಾಜ್ಯ ಸರಕಾರದ ಸಲಹೆ-ಸೂಚನೆಗಳ ಅನುಸರಣೆ ಮೂಲಕ ಇಂದಿನ ಪರಿಸ್ಥಿತಿಯನ್ನು, ಮಾನಸಿಕ ಒತ್ತಡ ಇತ್ಯಾದಿಗಳನ್ನು ಮೀರಲು ಸಾಧ್ಯ.
ಆತಂಕ ನಿವಾರಣೆಗೆ ಸುಲಭ ಮಾರ್ಗಗಳು
* ಟಿ.ವಿ. ಮೂಲಕ ಸಿನಿಮಾ ವೀಕ್ಷಣೆ, ಸಂಗೀತ ಆಲಿಸುವಿಕೆ.
* ಪ್ರಿಯವಾದ ಪುಸ್ತಕ ವಾಚನ.
* ಮಾನಸಿಕ ಭೀತಿ ಹೊಂದಿರುವವರು ಕೊರೊನಾ ಸಂಬಂಧ ವಾರ್ತೆಗಳನ್ನು ಆಲಿಸದಿರುವುದು ಉತ್ತಮ.
* ಅಗತ್ಯಕ್ಕೆ ಬೇಕಾದಷ್ಟು ನಿದ್ದೆ ಮಾಡಿ.
* ಮನೆಮಂದಿಯೊಂದಿಗೆ ಕುಶಲೋಪರಿ ಮಾತನಾಡಿ.
* ವ್ಯಾಯಾಮ ಮಾಡಿ.
* ಮಾನಸಿಕ ಒತ್ತಡ ನಿವಾರಣೆಯ ಉದ್ದೇಶದಿಂದ ಮದ್ಯ, ಕಾಫಿ ಇತ್ಯಾದಿ ಸೇವನೆ ನಡೆಸಬೇಡಿ.
* ಭೀತಿ ಮೂಡಿಸುವ ಚಿಂತನೆಗಳನ್ನು ಕೈಬಿಡಿ.
* ಕುಟುಂಬದ ಸದಸ್ಯರೊಂದಿಗೆ ಶುಭ ನುಡಿಗಳನ್ನೇ ಆಡಿ.


