ನವದೆಹಲಿ: ಕೊರೊನಾ ವೈರಸ್ ಹರಡುವುದಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಜನತಾ ಕಫ್ರ್ಯೂಗೆ ಇಂದು ನೀಡಿದ್ದ ಆಹ್ವಾನ ಯಶಸ್ವಿಯಾಗಿದೆ. ಭಾನುವಾರ ಇಡೀ ಭಾರತಕ್ಕೆ ಭಾರತವೇ ಸ್ತಬ್ಧವಾಗಿದೆ. ಈ ಮಧ್ಯೆ ಮತ್ತೊಂದು ಆಘಾತಕಾರಿ ಆದೇಶ ಹೊರ ಬಿದ್ದಿದೆ.
ಕೊರೊನಾ ವೈರಸ್ ಸೋಂಕಿತರು ಮತ್ತು ಶಂಕಿತರು ಕಾಣಿಸಿಕೊಂಡ ದೇಶದ 75 ಜಿಲ್ಲೆಗಳನ್ನು ಮುಂದಿನ ಹತ್ತು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಿದೆ.
ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ ಇಂದು 7ಕ್ಕೆ ಏರಿಕೆಯಾಗಿದೆ. ಈ ಕಾರಣದಿಂದ ವ್ಯಾಪಕ ರೋಗ ಪ್ರತಿರೋಧತೆಯ ಅನಿವಾರ್ಯತೆಯ ಕಾರಣ ರಾಜ್ಯದ ಕಾಸರಗೋಡು, ಕಣ್ಣೂರು, ಎರ್ನಾಕುಳಂ, ಪತ್ತನಂತಿಟ್ಟು, ಕೋಟ್ಟಯಂ, ಮಲಪ್ಪುರಂ, ತಿರುವನಂತಪುರ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ,ಕಲುಬುರುಗಿ, ಕೊಡಗು, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ ಜಿಲ್ಲೆಗಳು ಮಾರ್ಚ್.31ರವರೆಗೂ ಲಾಕ್ ಡೌನ್ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ನೀಡಿದೆ.


