ಕುಂಬಳೆ: ಕಾಸರಗೋಡಿನ ಕನ್ನಡ ಅಸ್ಮಿತೆಯ ಸಂಕೇತವಾಗಿ ಅನಂತಪುರ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ ಯಶಸ್ವಿಯಾಗಿ ಮೂಡಿಬರಲಿದೆ. ವರ್ತಮಾನದಲ್ಲಿ ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ಸವಾಲುಗಳಿಗೆ ಧ್ವನಿಯಾಗಿ ಸಿರಿ ಸಮ್ಮೇಳನ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿರಿ ಸಮ್ಮೇಳನದೊಂದಿಗೆ ಕೈಜೋಡಿಸುವ ಹೃದಯವಂತಿಕೆ ಪ್ರತಿಯೊಬ್ಬರೂ ವ್ಯಕ್ತಪಡಿಸುವ ಅಗತ್ಯ ಇದೆ ಎಂದು ರಾಷ್ಟ್ರೀಯ ಸಿರಿ ಸಮ್ಮೇಳನದ ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು ಅವರು ತಿಳಿಸಿದರು.
ಅನಂತಪುರ ರಾಷ್ಟ್ರೀಯ ಸಿರಿಸಮ್ಮೇಳನದ ಪೂರ್ವಭಾವಿಯಾಗಿ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸಿರಿ ಸಮ್ಮೇಳನ ಕೇಂದ್ರ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಹೆಸರಲ್ಲಿ ಸಂಘಟಿತರಾಗಿ ಮಾಡುವ ಚಟುವಟಿಕೆಗಳಿಗಷ್ಟೆ ವ್ಯಾಪಕತೆ ಇರುತ್ತದೆ. ಒಗ್ಗಟ್ಟು, ಅಂತರಂಗದ ಕ್ಲೇಶ ರಹಿತ ಸಾಮುದಾಯಿಕ ಭಾವನೆಗಳ ಮೂಲಕ ಸಿರಿ ಸಮ್ಮೇಳನದ ಸಮಗ್ರ ಯಶಸ್ಸು ನಮ್ಮ ಕರ್ತವ್ಯವೂ ಆಗಿದೆ ಎಂದು ಅವರು ತಿಳಿಸಿದರು.
ಕಸಾಪ ಕಾಸರಗೋಡು ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಜಯರಾಮ ಮಂಜತ್ತಾಯ ಎಡನೀರು, ಗೋಪಾಲ ಶೆಟ್ಟಿ ಅರಿಬೈಲು, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ಸಿರಿ ಸಮ್ಮೇಳನದ ವಿಜ್ಞಾಪನಾ ಪತ್ರವನ್ನು ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಾಂ ಪ್ರಸಾದ್ ಕಾಸರಗೋಡು ಅವರು ಗೋಪಾಲ ಶೆಟ್ಟಿ ಅರಿಬೈಲು ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿ ಚಾಲನೆ ನೀಡಿದರು. ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ನಿರ್ವಹಿಸಿದರು. ರವಿ ನಾಯ್ಕಾಪು ವಂದಿಸಿದರು.


