ಕಾಸರಗೋಡು: ವಯನಾಡಿನಲ್ಲಿ ಮಂಗನ ಕಾಯಿಲೆಗೆ ಒಬ್ಬಾಕೆ ಮಹಿಳೆ ಬಲಿಯಾಗಿರುವ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಂಗಗಳ ಸಾಮೂಹಿಕವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಸಮಾಲೋಚನೆ ನಡೆಸಲು ಪರಪ್ಪ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಇದುವರೆಗೆ ಜಿಲ್ಲೆಯಲ್ಲಿ ಯಾರಿಗೂ ಮಂಗನಕಾಯಿಲೆ ಬಾಧಿಸಿಲ್ಲ. ಇದನ್ನು ಸುಸೂತ್ರವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ, ಅರಣ್ಯ, ಮೃಗಸಂರಕ್ಷಣಾ ಇಲಾಖೆ ಸಹಯೋಗದೊಂದಿಗೆ ಸಭೆ ಆಯೋಜಿಸಲಾಗಿದ್ದು, ಗೃಹಸಂದರ್ಶನ ನಡೆಸುವ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜತೆಗೆ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಮಂಗಗಳು ಮೃತಪಟ್ಟಿರುವುದು ಪತ್ತೆಯಾದಲ್ಲಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಇದರಿಂದ ನೂರು ಮೀ. ವ್ಯಾಪ್ತಿಯಲ್ಲಿ ವೈರಸ್ ವ್ಯಾಪಿಸುವ ಸಾಧ್ಯತೆಯಿರುವುದರಿಂದ ತಕ್ಷಣ ಇದನ್ನು ದಫನಮಾಡಬೇಕಾಗುವುದು ಎಂದೂ ತಿಳಿಸಲಾಯಿತು.
ಬ್ಲಾಕ್ ಪಂಚಾಯಿತಿ ಅಧ್ಯಕ್ಷ ರಾಜನ್, ಗ್ರಾಪಂ ಅಧ್ಯಕ್ಷರಾದ ವಿದುಬಾಲ, ಅಪರ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಎಡಿಎಂ ದೇವಿದಾಸ್ ಎನ್, ಚೀಫ್ ವೆಟರಿನರಿ ವೈದ್ಯಾಧಿಕಾರಿ ಡಾ. ಶಿವ ನಾಯ್ಕ್, ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್‍ದಾಸ್, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


