ಬದಿಯಡ್ಕ: ವಿದ್ಯಾವಂತನು ಅತ್ಯಂತ ಪ್ರಸಂಶನಾರ್ಹನಾಗಿರುತ್ತಾನೆ. ಅವನಿಗೆ ಎಲ್ಲಾ ಕ್ಷೇತ್ರಗಳಲ್ಲೂ ಆದರ-ಗೌರವಗಳು ಲಭಿಸುತ್ತವೆ. ವಿದ್ಯೆಯು ಎಲ್ಲಾ ಕಡೆಯಲ್ಲೂ ಪೂಜನೀಯವಾಗಿದೆ ಎಂಬುದಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗ ಸಂಸ್ಥೆಯ ಅಧ್ಯಕ್ಷಎಸ್.ಎನ್.ಮಯ್ಯ ಬದಿಯಡ್ಕ ಅವರು ಅಭಿಪ್ರಾಯಪಟ್ಟರು.
ಕೊಲ್ಲಂಗಾನ ಸಮೀಪದ ಕಲ್ಲಕಟ್ಟ ಅಜ್ಜಾವರದ ಗೋಪಾಲಕೃಷ್ಣ ಮಯ್ಯ ಅವರ ಮನೆಯಲ್ಲಿ ಜರಗಿದ ಕೂಟ ಮಹಾ ಜಗತ್ತಿನ ಕಾಸರಗೋಡು ಅಂಗ ಸಂಸ್ಥೆಯ ಸಂಪರ್ಕ ಸಭೆಯಲ್ಲಿ ಬೆಳಗಾವಿ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಮಹಿಮಾ ಎಸ್.ರಾವ್ ಕಾಸರಗೋಡು ಅವರನ್ನು ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ದೇಶಮಂಗಲ ಶ್ರೀ ಶಂಕರನಾರಾಯಣ ಕುಟ್ಟಿಚ್ಚಾತ ದೇಗುಲದ ಅರ್ಚಕರಾದ ಶಿವರಾಮ ಕಾರಂತ ಹಾಗೂ ಅಜ್ಜಾವರ ಶ್ರೀ ಮಹಿಷ ಮರ್ದಿನಿ ದೇವಾಲಯದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಮಯ್ಯ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
ಏಪ್ರಿಲ್ 25 ಹಾಗೂ 26 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಲಿರುವ ವಿಶ್ವಕೂಟ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಟ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಂಗ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಮಧೂರು ಅವರು ವಿನಂತಿಸಿದರು.
ಸಮಾರಂಭಕ್ಕಿಂತ ಮೊದಲು ಶ್ರೀ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಜನಾ ಸಂಕೀರ್ತನೆ ಮುಂತಾದ ಕಾರ್ಯಕ್ರಮಗಳು ನಡೆದವು. ಅಂಗ ಸಂಸ್ಥೆಯ ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ಸ್ವಾಗತಿಸಿದರು. ಬಿಲಿಯನ್ ಪೌಂಡೇಶನ್ ಸಂಚಾಲಕ ಕೃಷ್ಣ ಪ್ರಸಾದ್ ಅಡಿಗ ವಂದಿಸಿದರು.


