ಬದಿಯಡ್ಕ: ಬೋಧಕ, ಶೋಧಕ,ಸತ್ಯಶೋಧಕ ಹಾಗೂ ತತ್ವ ಪ್ರತಿಪಾಧಕ, ಸತ್ ಸಂಸ್ಕಾರ ರೂಪಕರಾಗಿ ದಿ.ಕೇಳು ಮಾಸ್ತರ್ ಅವರು ಕನ್ನಡ ಸಾರಸ್ವತ ಲೋಕದ ವಿಶೇಷ ವ್ಯಕ್ತಿಯಾಗಗಿದ್ದವರು. ಗಹನ ವಿಷಯಗಳನ್ನು ಸರಳ ಭಾಷಾ ಶೈಲಿಯ ಮೂಲಕ ರೂಪಿಸಿ ಅಭಿಮಾನಿ ವಲಯವೊಂದನ್ನು ನಿರ್ಮಿಸಿದ್ದರು. ಅನೇಕ ಲೇಖಕ, ಬರಹಗಾರರನ್ನು ಸೃಸ್ಟಿಸುವಲ್ಲಿ ಪ್ರಧಾನ ಪಾತ್ರರಾಗಿದ್ದರು ಎಂದು ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ತಿಳಿಸಿದರು.
ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ದಿ.ಕೇಳು ಮಾಸ್ತರ್ ಅಭಿಮಾನಿ ಬಳಗ ಬದಿಯಡ್ಕ ಹಾಗೂ ಸ್ನೇಹಹಸ್ತ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ನಿವೃತ್ತ ಶಿಕ್ಷಕ, ಕವಿ, ಸಾಹಿತಿ, ಭಾಷಾಂತರಕಾರ ದಿ.ಕೇಳು ಮಾಸ್ತರ್ ಅಗಲ್ಪಾಡಿ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಳ ಜೀವನ ಶೈಲಿಯ ಕೇಳು ಮಾಸ್ತರರು ತಮ್ಮ ವಿಶಿಷ್ಟ ವಿಚಾರಧಾರೆ, ಸತ್ವಪೂರ್ಣ ಸಂವಹನಗಳ ಮೂಲಕ ಎಲ್ಲೆಡೆಗೂ ತಮ್ಮ ಪ್ರಭಾವವನ್ನು ಬೀರಿ ಚಿರಪರಿಚಿತರಾಗಿದ್ದರು. ತುಳುನಾಡಿನ ಭೂತಾರಾಧನೆ, ಹಬ್ಬ ಆಚರಣೆಗಳ ಸಮಗ್ರ ಅಧ್ಯಯನಗಳ ಮೂಲಕ ಹೊಸ ದಿಕ್ಕನ್ನು ಒದಗಿಸಿಕೊಟ್ಟ ಮಹಾನ್ ಚೇತನರಾಗಿದ್ದಾರೆ. ಅವರ ನಿರ್ಗಮನವು ಸಾರಸ್ವತ ಲೋಕಕ್ಕೆ ಭರಿಸಲಾರದ ನಷ್ಟವೆಂದು ವಿಶ್ಲೇಶಿಸಿದರು.
ಸರಳ ಜೀವನ ಶೈಲಿಯನ್ನು ಹೊಂದಿದ ಉನ್ನತ ಚಿಂತಕ ಕೇಳುಮಾಸ್ತರ್ ಅಗಲ್ಪಾಡಿ ಅವರು ಅನೇಕ ಮಂದಿಗೆ ಅವಕಾಶವನ್ನು ಕಲ್ಪಿಸಿಕೊಟ್ಟವರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಅವರು ದೀಪ ಬೆಳಗಿಸಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎ.ಶ್ರೀನಾಥ್ ಕೇಳುಮಾಸ್ತರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾತನಾಡಿ, ಹಿಂದಿನ ತಲೆಮಾರಿನ ಸಾಹಿತ್ಯ ಲೋಕದ ಅನೇಕ ವ್ಯಕ್ತಿತ್ವಗಳನ್ನು ಮಾಧ್ಯಮದ ಮೂಲಕ ಬೆಳಕಿಗೆ ತಂದ ಕೇಳು ಮಾಸ್ತರ್ ಅವರು ಸ್ಥಳೀಯ ಇತಿಹಾಸ ಸಂಶೋಧನೆಯಲ್ಲಿ ಅಪರಿಮಿತ ಸಾಧನೆಗೈಯ್ಯುವ ಮೂಲಕ ಬೆಳಕಾದವರು ಎಂದು ಬಣ್ಣಿಸಿದರು.
ಲಕ್ಷ್ಮಣ ಪ್ರಭು ಕರಿಂಬಿಲ, ಕೇಳು ಮಾಸ್ತರ್ ಅವರ ಪುತ್ರ, ಶಿಕ್ಷಕ ಕೃಷ್ಣ ಯಾದವ್ ಉಪಸ್ಥಿತರಿದ್ದು ಕೇಳು ಮಾಸ್ತರ್ ಅವರ ಒಡನಾಟದ ನೆನಪುಗಳನ್ನು ಬಿಚ್ಚಿಟ್ಟರು. ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಶಶಿಧರ ತೆಕ್ಕೆಮೂಲೆ, ನಿವೃತ್ತ ಉಪನೋಂದಣಾಧಿಕಾರಿ ಮೊಹಮ್ಮದಾಲಿ ಪೆರ್ಲ, ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಕಾಸರಗೋಡು, ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ತುಳು ವಲ್ರ್ಡ್‍ನ ರಾಜೇಶ್ ಆಳ್ವ ಬದಿಯಡ್ಕ, ಅಖಿಲ ಕೇರಳ ಯಾದವ ಸಭಾದ ಮುಖಂಡ ಉದಯಕುಮಾರ್ ಬದಿಯಡ್ಕ, ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು, ಪತ್ರಕರ್ತ ಪುರುಷೋತ್ತಮ ಪೆರ್ಲ, ಶಿಕ್ಷಕಿ ಜ್ಯೋಸ್ನ್ಸಾ ಎಂ.ಕಡಂದೇಲು ಮೊದಲಾದವರು ನುಡಿನಮನ ಸಲ್ಲಿಸಿದರು.
ಸ್ನೇಹಹಸ್ತ ಚಾರಿಟೇಬಲ್ ಟ್ರಸ್ಟ್‍ನ ಬಿ.ಎಸ್.ಏತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ನಿರೂಪಿಸಿದರು. ಗಂಗಾಧರ ತೆಕ್ಕೆಮೂಲೆ ವಂದಿಸಿದರು.


