ಕಾಸರಗೋಡು: `ವಿಜಯ ಯಾತ್ರೆ' ಅಂಗವಾಗಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಸನ್ನಿಧಾನಂಗಳವರ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಶ್ರೀಪಾದಂಗಳವರು ಶುಕ್ರವಾರ ಸಂಜೆ ಮಧೂರಿಗೆ ಚಿತ್ತೈಸಿದರು.
ಉಡುಪಿಯಿಂದ ಹೊರಟು ಸಂಜೆ ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ಸಕಲ ಸರಕಾರಿ ಗೌರವಾದರಗಳೊಂದಿಗೆ ಜಗದ್ಗುರುಗಳವರನ್ನು ಬರಮಾಡಿಕೊಳ್ಳಲಾಯಿತು. ಆ ಬಳಿಕ ಅಣಂಗೂರಿನ ಶ್ರೀ ಅಣಂಗೂರು ಶಾರದಾನಗರದ ಶ್ರೀ ಶಾರದಾಂಬಾ ಭಜನಾ ಮಂದಿರದ
ಶ್ರೀ ಶಾರದಾಂಬಾ ಸಭಾಭವನದ ಮುಂಭಾಗದಲ್ಲಿ ಸ್ಥಾಪಿಸಿದ ಶಾಶ್ವತ ಚಪ್ಪರವನ್ನು ಲೋಕಾರ್ಪಣೆಗೈದು ಮಧೂರಿಗೆ ಚಿತ್ತೈಸಿದರು.
ಶೃಂಗೇರಿ ಶ್ರೀಗಳವರನ್ನು ಭಜನೆ, ವೇದಘೋಷಗಳೊಂದಿಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಶ್ರೀ ಕ್ಷೇತ್ರದಲ್ಲಿ ಧೂಳಿ ಪಾದಪೂಜೆ, ದರ್ಶನ, ಸತ್ಸಂಗ, ಪಾದಪೂಜೆಯ ಬಳಿಕ ಆಶೀರ್ವಚನ ನೀಡಿದರು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ರತನ್ ಕುಮಾರ್ ಕಾಮಡ ಅವರ ಮಾರ್ಗದರ್ಶನದಲ್ಲಿ ದೇವಸ್ವಂ ಮಂಡಳಿ ಆಯುಕ್ತ ಮುರಳಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷ ಬಿ.ಎಸ್.ರಾವ್, ಕೋಶಾಧಿಕಾರಿ ಮಂಜುನಾಥ ಕಾಮತ್, ಕಾರ್ಯದರ್ಶಿ ನಾರಾಯಣಯ್ಯ, ಜೊತೆ ಕಾರ್ಯದರ್ಶಿ ಮುರಳಿ ಗಟ್ಟಿ, ಭಕ್ತ ಜನ ಸಮಿತಿ ಕಾರ್ಯದರ್ಶಿ ಪ್ರಭಾಶಂಕರ್, ಯು.ಬಾಲಕೃಷ್ಣ, ಜೊತೆಕಾರ್ಯದರ್ಶಿ ಕೆ.ವಿಷ್ಣು ಭಟ್, ನ್ಯಾಯವಾದಿ ಅನಂತರಾಮ್, ಎ.ಮಹಾಲಿಂಗಯ್ಯ, ಎ.ಮನೋಹರ, ಬಲರಾಮ ಭಟ್, ಎಸ್.ಎನ್.ಮಯ್ಯ, ಗಿರೀಶ್ ಸಂಧ್ಯಾ, ಉಮೇಶ್ ನಾೈಕ್, ಸುರೇಶ ಸಿ.ಎಚ್, ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು.





