ಕಾಸರಗೋಡು: ಶೃಂಗೇರಿ ಶ್ರೀ ಶಾರದಾಪೀಠದ ಯತಿವರ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ವಿಜಯಯಾತ್ರೆ ಅಂಗವಾಗಿ ಕಾಲಡಿಗೆ ಸಂಚರಿಸುವ ಮಧ್ಯೆ ಕಾಸರಗೋಡಿಗೆ ಶುಕ್ರವಾರ ಭೇಟಿ ನೀಡಿದರು.
ನಿನ್ನೆ ಸಂಜೆ ಅಣಂಗೂರು ಶ್ರೀ ಶಾರದಾಂಬಾ ಭಜನಾಮಂದಿರಕ್ಕೆ ಚಿತ್ತೈಸಿದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಮಂದಿರ ಸಮಿತಿ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀಶಾರದಾಂಬಾ ಸಭಾ ಭವನದ ಮುಂಭಾಗದ ಶಾಶ್ವತ ಚಪ್ಪರವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಲೋಕಾರ್ಪಣೆಗೈದರು. ಈ ಸಂದರ್ಭ ಸ್ವಾಮೀಜಿ ಅವರ ದರ್ಶನ, ಸತ್ಸಂಗ ನಡೆಯಿತು.
ನಂತರ ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಧೂಳೀಪೂಜೆ, ದರ್ಶನ, ಸತ್ಸಂಗ, ಪಾದಪೂಜೆ, ಆಶೀರ್ವಚನ ನಡೆಯಿತು. 7ರಂದು ಬೆಳಗ್ಗೆ ಶ್ರೀದೇವರಪೂಜೆ, ಪಾದಪೂಜೆ, ಭಕ್ತದರ್ಶನ, ಮಧ್ಯಾಹ್ನ ಪೂಜೆಯ ನಂತರ ಶ್ರೀಗಳು ಕೋಯಿಕ್ಕೋಡಿಗೆ ಪ್ರಯಾಣ ಬೆಳೆಸುವರು. ಉಡುಪಿಯಿಂದ ಆಗಮಿಸಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರನ್ನು ಸಂಜೆ ಕೇರಳ-ಕರ್ನಾಟಕ ಗಡಿಪ್ರದೇಶ ತಲಪ್ಪಾಡಿಯಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ ಬರಮಾಡಿಕೊಳ್ಳಲಾಗಿತ್ತು.





