ಮಂಜೇಶ್ವರ: ಕಡಂಬಾರು ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಗ್ರಂಥಾಲಯದ ಉದ್ಘಾಟನೆಯು ಶನಿವಾರ ಜರಗಿತು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ರವರು ನೂತನ ಕಟ್ಟಡ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಖಾಸಗೀ ಶಾಲೆಗಳಿಗೆ ಸಡ್ಡು ಹೊಡೆಯಲು ಸಾಧ್ಯ, ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ಕಾರ್ಯನಿರ್ವಹಿಸಿದರೆ, ಶಿಕ್ಷಣ ವಲಯದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬಹುದಾಗಿದೆ, ಸರ್ಕಾರಿ ಶಾಲೆಗಳನ್ನು ರಕ್ಷಿಸಲು ಜನರ ಸಹಭಾಗಿತ್ವ ಅತ್ಯಗತ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಅವರು ಸರ್ವಶಿಕ್ಷಣ ಅಭಿಯಾನದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್, ಬ್ಲಾಕ್ ಪಂಚಾಯತು ಸದಸ್ಯೆ ಅಶಲತಾ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಬ್ಲಾಕ್ ಶಿಕ್ಷಣ ಯೋಜನಾಧಿಕಾರಿ ಆದರ್ಶ್ ಬಿ.ಪಿ, ಶಾಲಾ ಎಸ್‍ಎಂಸಿ ಅಧ್ಯಕ್ಷ ಯದುನಂದನ ಆಚಾರ್ಯ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುತ್ತಲಿಬ್ ಕೆದುಂಬಾಡಿ, ಮಾತೃಮಂಡಳಿ ಅಧ್ಯಕ್ಷೆ ಝುಹರಾ ಕಡಂಬಾರು, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ರಾವ್ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಕಾರ್ಯಕ್ರಮ ಸಮಿತಿ ಸಂಚಾಲಕ ಮೂಸಕುಂಞÂ.ಡಿ ವರದಿ ವಾಚಿಸಿದರು. ನೂತನ ಗ್ರಂಥಾಲಯವನ್ನು ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್ ಉದ್ಘಾಟಿಸಿದರು.
ಶಾಲೆಗೆ ಗ್ರಂಥಾಲವನ್ನು ಅನುದಾನಗೈದ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ರಾವ್ ರವರನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಇಸ್ಮಾಯಿಲ್ ಎಂ.ವಂದಿಸಿದರು. ರಫೀಕ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.


