ಕಾಸರಗೋಡು: ಕೊರೊನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿದ್ದು ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಮತ್ತೆ ಆರು ಮಂದಿಗೆ ಕರೋನಾ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14ಕಕ್ಕೇರಿದೆ.
ಕೇರಳದಲ್ಲಿ ಶನಿವಾರ ಒಟ್ಟು 12 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು 52 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದಂತಾಗಿದೆ. ಕಣ್ಣೂರು ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ತಲಾ ಮೂರರಂತೆಯೂ, ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಎಲ್ಲಾ ಕೊರೊನಾ ಸೋಂಕಿತರು ಕೊಲ್ಲಿ ದೇಶದಿಂದ ಬಂದವರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ದೃಢಗೊಂಡಿರುವವರಲ್ಲಿ ಐವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲೂ, ಒಬ್ಬರು ಎರ್ನಾಕುಳಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ ರೋಗ ದೃಢಗೊಂಡಿರುವ ಇಬ್ಬರು ತಲಶ್ಶೇರಿ ಜನರಲ್ ಆಸ್ಪತ್ರೆಯಲ್ಲೂ, ಒಬ್ಬರು ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರ್ನಾಕುಳಂನ ಮೂವರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರೆಲ್ಲರೂ ಕೊಲ್ಲಿ ರಾಷ್ಟ್ರದಿಂದ ಬಂದವರು.
ಕೇರಳ ರಾಜ್ಯದಲ್ಲಿ ಒಟ್ಟು 53,013 ಮಂದಿ ತೀವ್ರ ನಿಗಾದಲ್ಲಿದ್ದಾರೆ. ಇವರಲ್ಲಿ 52,785 ಮಂದಿ ಮನೆಗಳಲ್ಲೂ, 228 ಮಂದಿ ಆಸ್ಪತ್ರೆಯಲ್ಲೂ ನಿಗಾದಲ್ಲಿದ್ದಾರೆ. ಶನಿವಾರ 70 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 3716 ಮಂದಿಯ ಸ್ಯಾಂಪಲ್ ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ. 2266 ಮಂದಿಗೆ ಕೊರೊನಾ ವೈರಸ್ ತಟ್ಟಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.


