ಕೊಲ್ಲಂ: ಕೊಲ್ಲಂ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಹೋಮ್ ಕ್ವಾರೆಂಟೈನ್ ಸೂಟನೆ ಉಲ್ಲಂಘಿಸಿ ಊರಿಗೆ ತೆರಳಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.
ಹನಿಮೂನ್ ಗಾಗಿ ವಿದೇಶಕ್ಕೆ ತೆರಳಿದ್ದ ಅನುಪಮ್ ಮಿಶ್ರಾ ಅವರು ಮಾರ್ಚ್ 18ರಂದು ಸಿಂಗಾಪುರದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಸೂಚಿಸಲಾಗಿತ್ತು. ಆದರೆ ಈ ನಿಯಮವನ್ನು ಉಲ್ಲಂಘಿಸಿ ಅನುಪಮ್ ಮಿಶ್ರಾ ಅವರು ಕಾನ್ಪುರಕ್ಕೆ ತೆರಳಿದ್ದಾರೆ. ಈ ವಿಷಯ ತಿಳಿದು ಕೊಲ್ಲಂ ಜಿಲ್ಲಾಧಿಕಾರಿ ಬಿ. ಅಬ್ದುಲ್ ನಾಸರ್ ಕೇರಳ ಸರ್ಕಾರದ ಗಮನಕ್ಕೆ ತಂದಿದ್ದು ಸರ್ಕಾರ ಮಿಶ್ರಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಶ್ರಾ ಅವರು ತನ್ನನ್ನು ಮನೆಗೆ ತೆರಳಿ ವಿಶ್ರಾಂತಿಗೆ ಸೂಚಿಸಲಾಗಿತ್ತು. ಈ ಕಾರಣದಿಂದ ಕೊಲ್ಲಂ ಬಿಟ್ಟು ಊರಿಗೆ ಮರಳಿರುವೆ. ತನ್ನನ್ನು ಕೊಲ್ಲಂ ನ ವಸತಿಯಲ್ಲಿ ಉಳಿಯಲು ಸೂಚಿಸಿದ್ದೆಂಬುದು ತನಗೆ ತಿಳಿದಿರಲಿಲ್ಲ ಎಂದು ತಿಳಿಸಿರುವರು.


