ಕುಂಬಳೆ: ಅನಂತಪುರದಲ್ಲಿ ಮೇ.1 ರಿಂದ 3ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದಲ್ಲಿ ವಿಶೇಷವಾಗಿ ಆಯೋಜಿಸಲಾಗುವ ಕವಿ-ಕಾವ್ಯ ಮಂಟಪ ಕಾರ್ಯಕ್ರಮದ ಸಮಗ್ರ ರೂಪುರೇಖೆಗಳ ಬಗ್ಗೆ ಸಮಾಲೋಚನಾ ಸಭೆ ಮಂಗಳವಾರ ಸಂಜೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿರುವ ಸಿರಿ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆಯಿತು.
ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ದಾಸ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ, ಕಾರ್ಟೂನ್ ಬೆಂಗಳೂರು ಇದರ ಸದಸ್ಯ ವೆಂಕಟ್ ಭಟ್ ಎಡನೀರು, ಚುಟುಕು ಸಾಹಿತ್ಯ ಪರಿಷತ್ತಿನ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಸಾಪ ಸದಸ್ಯ ಸುಂದರ ಬಾರಡ್ಕ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಈ ಸಂದರ್ಭ ಕಾರ್ಟೂನ್ ಬೆಂಗಳೂರು ಸಂಸ್ಥೆಯ ಆಶ್ರಯದಲ್ಲಿ ಸಿರಿ ಸಮ್ಮೇಳನದ ಸಮಾರಂಭದಲ್ಲಿ ವಿಶೇಷ ಕಾರ್ಟೂನ್ ಪ್ರದರ್ಶನಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ವ್ಯವಸ್ಥೆಗಳೊಂದಿಗೆ ಅಖಿಲ ಕರ್ನಾಟಕ ಮಟ್ಟದಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳುವುದಾಗಿ ವೆಂಕಟ್ ಭಟ್ ಎಡನೀರು ಅವರು ತಿಳಿಸಿದರು.
ಕರ್ನಾಟಕ ಸಹಿತ ವಿವಿಧೆಡೆಗಳ ಕನ್ನಡ ಕವಿಗಳು, ಕಥೆಗಾರರನ್ನು ಪಾಲ್ಗೊಳಿಸಿ ಕವಿ-ಕಾವ್ಯ ಮಂಟಪವನ್ನು ಯಶಸ್ವಿಗೊಳಿಸಲು ತೀರ್ಮಾನಿಸಿ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ವಿ.ಬಿ.ಕುಳಮರ್ವ, ಅಧ್ಯಕ್ಷರಾಗಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪಾಧ್ಯಕ್ಷರಾಗಿ ವೆಂಕಟ್ ಭಟ್ ಎಡನೀರು, ಶಂಕರ್ ಸ್ವಾಮಿಕೃಪಾ, ಪ್ರಧಾನ ಸಂಚಾಲಕರಾಗಿ ಹರೀಶ್ ಸುಲಾಯ ಒಡ್ಡಂಬೆಟ್ಟು, ಸಂಚಾಲಕರಾಗಿ ಸುಂದರ ಬಾರಡ್ಕ, ಚೇತನಾ ಕುಂಬಳೆ, ವನಜಾಕ್ಷಿ ಚೆಂಬ್ರಕಾನ ಅವರನ್ನು ಆರಿಸಲಾಯಿತು.
ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಉಪಸ್ಥಿತರಿದ್ದು ಮಾಹಿತಿ ನೀಡಿದರು. ರಾಜೇಶ್ ಆಳ್ವ ಬದಿಯಡ್ಕ ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಮುಂದಿನ ಸಭೆ ಮಾ.14 ರಮದು ಶನಿವಾರ ಸಂಜೆ 4 ಕ್ಕೆ ಕುಂಬಳೆಯ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.


