ಬದಿಯಡ್ಕ: ಕೊರೊನಾ ವೈರಸ್ ಹರಡದಂತೆ ಬದಿಯಡ್ಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಬದಿಯಡ್ಕ ಪ್ರಯಾಣಿಕರ ತಂಗುದಾಣದ ಸಮೀಪ ಬುಧವಾರ ಬೆಳಗ್ಗೆ ಶುಚಿತ್ವಕ್ಕೆ ಆದ್ಯತೆಯನ್ನು ನೀಡಿ ಕೈತೊಳೆಯಲು ಟೇಪ್ ಅಳವಡಿಸಲಾಯಿತು.
ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಬದಿಯಡ್ಕ ಹ್ಯಾಪಿ ಲೈಟ್ ಮತ್ತು ಡಿನ್ನರ್ ಸೆಟ್ ಇವರ ನೇತೃತ್ವದಲ್ಲಿ `ಕೈತೊಳೆದು ಬಸ್ ಹತ್ತಿ, ಬಸ್ ಇಳಿದು ಕೈತೊಳೆದು ಮುಂದುವರಿಯಿರಿ' ಎಂಬ ನಾಮಫಲಕದೊಂದಿಗೆ ಬದಿಯಡ್ಕ ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಕೈತೊಳೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆಯನ್ನು ನೀಡಿದರು. ಅವರು ಮಾತನಾಡಿ ಕೊರೊನಾ ಎಂಬ ಮಾರಕ ವೈರಸ್ ಹರಡದಂತೆ ಪ್ರತಿಯೊಬ್ಬ ನಾಗರಿಕನೂ ಮುತುವರ್ಜಿ ವಹಿಸಿದರೆ ಆ ರೋಗವನ್ನು ತಡೆಗಟ್ಟಲು ಸಾಧ್ಯವಿದೆ. ಶುಚಿತ್ವಕ್ಕೆ ಮಹತ್ವವನ್ನು ನೀಡಿ ಸಂಘಟನೆಯು ಕೈಗೊಂಡ ಕಾರ್ಯವು ಶ್ಲಾಘನೀಯವೆಂದರು.
ಬದಿಯಡ್ಕ ಗ್ರಾಪಂ ಕಾರ್ಯದರ್ಶಿ ಪ್ರದೀಪನ್, ಸಹಾಯಕ ಉದ್ಯೋಗಿ ಬಾಬು, ಪೊಲೀಸ್ ಇಲಾಖೆಯ ಸಲೀಂ, ಕುಂಬ್ಡಾಜೆ ಗ್ರಾಮಪಂಚಾಯಿತಿ ಸದಸ್ಯ ಎಸ್.ಮುಹಮ್ಮದ್, ಫಾರೂಕ್, ಸುರೇಶ್, ಬಾಲಕೃಷ್ಣ ಮೊದಲಾದವರು ಈ ಸಂದರ್ಭದಲ್ಲಿ ಜೊತೆಗಿದ್ದರು. ಹ್ಯಾಪಿ ಲೈಟ್ ಮತ್ತು ಸೌಂಡ್ಸ್‍ನ ಅಬೂಬಕ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

