ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೊರೊನಾ ಜಾಗೃತಿ ಕುರಿತು ತೀರ್ಮಾನಗಳನ್ನು ಕೈಗೊಳ್ಳುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕೊರೊನಾ ಜಾಗೃತಿ ಸಮಿತಿ ಹಾಗೂ ಜನಪ್ರತಿನಿಧಿಗಳ ಸಭೆಯು ಬುಧವಾರ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಈ ಸಂದರ್ಭದಲ್ಲಿ ಮಾತನಾಡುತ್ತಾ ವಿದೇಶದಿಂದ ಆಗಮಿಸಿದ ಪ್ರತಿಯೊಬ್ಬರೂ ಜಾಗೃತಿವಹಿಸಿ, ಕೊಂಚ ದಿನಗಳ ಮಟ್ಟಿಗೆ ತಮ್ಮ ಮನೆಯಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಲಕ್ಷಣಗಳಿದ್ದರೂ, ಇಲ್ಲದಿದ್ದರೂ ಮನೆಯಲ್ಲಿಯೇ ಉಳಿದುಕೊಳ್ಳವುದರಿಂದ ರೋಗ ಹರಡದಂತೆ ತಡೆಗಟ್ಟಬಹುದು ಎಂದರು.
ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮಾತನಾಡಿ ವಿದೇಶದಿಂದ ಆಗಮಿಸಿದ ಜನರನ್ನು ತಿಳಿದುಕೊಂಡು ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಮನೆಮಂದಿಯೊಂದಿಗೂ, ಇತರರೊಂದಿಗೂ ವ್ಯವಹರಿಸುವ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕು ಎಂದರು. ಉಪಾಧ್ಯಕ್ಷೆ ಸೈಬುನ್ನೀಸ, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸತ್ಯಶಂಕರ ಭಟ್, ಬದಿಯಡ್ಕ ಪೊಲೀಸ್ ಠಾಣೆಯ ಸಲೀಂ, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೊರೊನಾ ನಿಯಂತ್ರಣ ಸಮಿತಿ ಸದಸ್ಯರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

