ಕಾಸರಗೋಡು: ಅನ್ಯಾಯವಾಗಿ ಕಾಸರಗೋಡು ಕೇರಳಕ್ಕೆ ಸೇರ್ಪಡೆಗೊಂಡಾಗ ಈ ಅನ್ಯಾಯದ ವಿರುದ್ಧ ದನಿಯೆತ್ತಿದ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ನಿರಂತರ ಹೋರಾಟ ಮಾಡಿದರು. ಕಾಸರಗೋಡಿನ ಬಗ್ಗೆ ಅಪಾರ ಕಾಳಜಿ ವಹಿಸಿದ್ದ ಅವರು ಆಯೋಜಿಸಿದ ಕನ್ನಡ ಸಮ್ಮೇಳನಗಳಲ್ಲಿ ಕಾಸರಗೋಡಿನ ಕನ್ನಡಿಗರನ್ನು ಆಹ್ವಾನಿಸಿ ಗೌರವಿಸಿದ ಕನ್ನಡ ಕಟ್ಟಾಳು ಎಂದು ನ್ಯಾಯವಾದಿ ಸದಾನಂದ ರೈ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಸರಗೋಡಿನ ಕನ್ನಡಿಗರು ಕೇರಳ ಸರಕಾರದಿಂದ ಅನ್ಯಾಯಕ್ಕೆ ತುತ್ತಾದಾಗೆಲ್ಲ ಕರ್ನಾಟಕ ಸರಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಕಾಸರಗೋಡಿನ ಕನ್ನಡಿಗರಿಗೆ ಸೂರ್ತಿಯ ಸೆಲೆಯಾಗಿದ್ದರು. ಕಾಸರಗೋಡಿನೊಂದಿಗೆ ನಿಕಟ ಸಂಪರ್ಕವನ್ನು ಇರಿಸಿಕೊಂಡಿದ್ದ ಅವರು ಹಲವು ಸಂದರ್ಭದಲ್ಲಿ ಕಾಸರಗೋಡಿಗೆ ಬಂದು ಕನ್ನಡಿಗರಿಗೆ ಚೈತನ್ಯವನ್ನು ತುಂಬಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್, ಸಂಘಟಕ ಜಗದೀಶ್ ಕೂಡ್ಲು, ಕೆ.ಸಿ.ಎನ್. ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮೊದಲಾದವರು ಮಾತನಾಡಿ ಡಾ|ಪಾಪು ಅವರಿಗೆ ನುಡಿ ನಮನ ಸಲ್ಲಿಸಿದರು. ಉದ್ಯಮಿ ನಿರಂಜನ ಕೊರಕ್ಕೋಡು ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ವಂದಿಸಿದರು. ಇದೇ ಸಂದರ್ಭದಲ್ಲಿ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

