ಕುಂಬಳೆ: ಅರಿಕ್ಕಾಡಿ ಸಮೀಪದ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಶುಕ್ರವಾರ ಅಪರಾಹ್ನ ಶುಭ ಚಾಲನೆ ನೀಡಿದರು.
ಶ್ರೀ ಗುರುನಾಥ ಸ್ವಾಮಿ ವೇದಿಕೆಯಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಸಂಪ್ರದಾಯಿಕವಾಗಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ಹರಿಶ್ಚಂದ್ರ ಆಚಾರ್ಯ ಬೇಕೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಲೋಕಾನುಭವ, ಆತ್ಮಾನುಭವಗಳೆರಡೂ ಯಶಸ್ವಿ ಜೀವನ ಪಥಕ್ಕೆ ಅಗತ್ಯವಿದೆ. ಆದರೆ ತ್ಯಾಗದ ಬದುಕು ಮಾತ್ರ ಸತ್ಯವಾದುದಾಗಿದ್ದು, ಆತ್ಮಜ್ಞಾನದ ಸಂಪತ್ತು ಶಾಶ್ವತ ಎಂದರು. ಬದುಕಿನ ಸಂಪತ್ತುಗಳ ಗಳಿಕೆಯಲ್ಲಿ ಧರ್ಮವೊಂದೇ ಅಧಿಕೃತ ಪಾಲುದಾರ ಆಗಿರುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದಷ್ಟೇ ಬದುಕು ಅರ್ಥವತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳ ಮೂಲಕ ಆಧ್ಯಾತ್ಮಿಕ-ಧಾರ್ಮಿಕ ಶಕ್ತಿ ಚೇತನಗಳು ಪಸರಿಸುತ್ತದೆ ಎಂದು ಶ್ರೀಗಳು ತಿಳಿಸಿದರು. ತಾಳ್ಮೆ, ಸಮಾಧಾನಕ್ಕೆ ಸಂಬಂಧಿಸಿ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಮಾದರಿಯಾಗಿದ್ದು, ಕಲ್ಲೊಂದನ್ನು ಸಂದರ ಶಿಲ್ಪವಾಗಿರುವ ಮನೋಸ್ಥಿತಿ ಸಮುದಾಯದ ವಿಶೇಷ ತಾಳ್ಮೆಗೆ ನಿದರ್ಶನವಾಗಿದ್ದು ಸಮಾಜಕ್ಕೆ ಇಂದು ಅಂತಹ ತಾಳ್ಮೆಯ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಶುಭಹಾರೈಸಿದರು.
ಬ್ರಹ್ಮಶ್ರೀ ಪುರೋಹಿತ ರಾಮಕೃಷ್ಣ ಆಚಾರ್ಯ ಅರಿಕ್ಕಾಡಿ, ಜ್ಯೋತಿಷ್ಯ ವಿದ್ವಾನ್ ಉಮೇಶ ಆಚಾರ್ಯ ಪಡೀಲ್, ಕೇಶವ ಆಚಾರ್ಯ ಮಂಗಳೂರು, ಕೋಡಿಬೈಲು ನಾರಾಯಣ ಹೆಗ್ಡೆ, ಡಾ.ಬಾಲಕೃಷ್ಣ ಹೊಸಂಗಡಿ, ಪರಮೇಶ್ವರ ಆಚಾರ್ಯ ನೀರ್ಚಾಲ್, ರತ್ನಾಕರ ಆಚಾರ್ಯ ಕಟ್ಟೆಮಾರ್, ವಿಠಲ ಆಚಾರ್ಯ ಕುಂಬಳೆ, ದಿವಾಕರ ಆಚಾರ್ಯ ಬೀರಂತಬೈಲು ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆಗೊಳಿಸಲಾಯಿತು. ಕಾಟುಕುಕ್ಕೆ ವಾಸುದೇವ ಆಚಾರ್ಯ ಸ್ವಾಗತಿಸಿ, ವಸಂತ ಆಚಾರ್ಯ ಪುತ್ತೂರು ವಂದಿಸಿದರು. ನ್ಯಾಯವಾದಿ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು.
ಶನಿವಾರ ಬೆಳಿಗ್ಗೆ 6.30ರಿಂದ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಬಿಂಬ ಸಂಕೋಚ, ಬಿಂಬ ಶುದ್ದಿ, ಬಿಂಬ ಜಲಾಧಿವಾಸ, ಪೀಠಾಧಿವಾಸ, ಬಾಲಾಲಯ ವಿಸರ್ಜನೆ, ಯಾಗ ಮಂಟಪದಲ್ಲಿ 108 ಕಾಯಿ ಮಹಾಗಣಪತಿ ಹವನ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಸಂಜೆ 6.30 ರಿಂದ ಮಹಾಗಣಪತಿ ಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಧ್ಯಾನಾಧಿವಾಸ, ಬಿಂಬ ಶುದ್ದಿ, ತತ್ವನ್ಯಾಸ, ಶಯ್ಯಾಧಿವಾಸ, ನಿದ್ರಾಕುಂಭ ಸ್ಥಾಪನೆ, ಪ್ರತಿಷ್ಠಾಂಗ ತತ್ವಹೋಮ, ಅಧಿವಾಸ ಹೋಮ, ಪೀಠಾಧಿವಾಸ, ಶಿಖರಾಧಿವಾಸ, ಪ್ರಾಯಶ್ಚಿತ್ತಾದಿ ಹೋಮ, ಮಹಾಬಲಿಪೀಠ ಪ್ರತಿಷ್ಠೆ ನಡೆಯಿತು. ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಯುವ ಕವಿಗೋಷ್ಠಿ ನಡೆಯಿತು. ಅಶೋಕ ಎನ್ ಆಚಾರ್ಯ ಕಡೇಶಿವಾಲಯ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಡಾ.ಜಿ.ಜ್ಞಾನಾನಂದ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಮಲಾರ್ ಜಯರಾಮ ರೈ ಉಪಸ್ಥಿತರಿದ್ದರು. ರಾತ್ರಿ 7 ರಿಂದ ಕುಂಟಾರು ಪ್ರಕಾಶ ಆಚಾರ್ಯ ತಂಡದವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ, ಬಳಿಕ ಭಕ್ತಿಗಾನಸುಧಾ ನಡೆಯಿತು. ಸಂಜೆ 4ಕ್ಕೆ ಯುವ ಸಂಗಮದಲ್ಲಿ ಯೋಗೀಶ ಆಚಾರ್ಯ ಮಠದಮೂಲೆ ಅಧ್ಯಕ್ಷತೆ ವಹಿಸಿದ್ದರು.
ಇಂದಿನ ಕಾರ್ಯಕ್ರಮ:
ಭಾನುವಾರ ಬೆಳಿಗ್ಗೆ 5ಕ್ಕೆ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಅಧಿವಾಸ ಕ್ರಿಯಾದಿಗಳು ನಡೆದು ಬಳಿಕ 7.29 ರಿಂದ 9.37ರ ಮಧ್ಯೆ ಅಷ್ಟಬಂಧಪೂರ್ವಕ ಶ್ರೀಕಾಳಿಕಾಂಬಾ, ಶ್ರೀಮಹಾಗಣಪತಿ, ಶ್ರೀವಿಶ್ವಕರ್ಮ, ಶ್ರೀಕಾಲಬೈರವೇಶ್ವರ ದೇವರ ಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ನಾಡಿ ಸಂಧಾನಪೂರ್ವಕ ಜೀವಕುಂಭಾಭಿಷೇಕ, ಪ್ರಸನ್ನಪೂಜೆ, ಭದ್ರದೀಪ ಪ್ರತಿಷ್ಠೆ, ಕವಾಟ ಬಂಧನ, ಯಾಗಮಂಟಪದಲ್ಲಿ ಶ್ರೀವಿಶ್ವಕರ್ಮ ಮಹಾಯಾಗ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 6.30 ರಿಂದ ಶ್ರೀಗುರುಮಹಾಗಣಪತಿ ಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಶ್ರೀದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಬೆಳಿಗ್ಗೆ 10 ರಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ತಂಡಗಳಿಂದ ಸಂಕೀರ್ತನೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12 ರಿಂದ ಅರವಿಂದ ಆಚಾರ್ಯ ಮಾಣಿಲ ಹಾಗೂ ತಮಡದವರಿಂದ ಸಂತವಾಣಿ, 1.30 ರಿಂದ ವಿದ್ವಾನ್ ಪೂರ್ಣಪ್ರಜ್ಞ ಆಚಾರ್ಯ ಕಲ್ಮಾಡಿ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ರಾತ್ರಿ 7 ರಿಂದ ವಿಜಯಕುಮಾರ್ ಕೊಡಿಯಾಲಬೈಲ್ ನಿರ್ದೇಶನದಲ್ಲಿ ಕಲಾಸಂಗಮ ತಂಡದಿಂದ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 4ಕ್ಕೆ ಕಾಳಹಸ್ತೇಂದ್ರ ಸರಸ್ವತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಎನ್.ಹರಿಶ್ಚಂದ್ರ ಆಚಾರ್ಯ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಪಿ.ಹರಿಶ್ಚಂದ್ರ ಆಚಾರ್ಯ ಬೇಕೂರು ಉಪಸ್ಥಿತರಿರುವರು. ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಧಾರ್ಮಿಕ ಉಪನ್ಯಾಸ ನೀಡುವರು. ಗಣ್ಯರು ಉಪಸ್ಥಿತರಿರುವರು.



