ಮುಳ್ಳೇರಿಯ: ಕೊರೋನಾ ಜಾಗೃತಿಯ ನಿಟ್ಟಿನಲ್ಲಿ ಸರ್ಕಾರಿ ಯಂತ್ರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸ್ಥಳೀಯಾಳಿತ ಸಂಸ್ಥೆಗಳ ಮೂಲಕ ಕರಪತ್ರ ವಿತರಣೆ, ಮನೆಮನೆ ಸಂದರ್ಶನದ ಮೂಲಕ ಜಾಗೃತಿ ಮೊದಲಾದ ಅಂಶಗಳು ಇದರಲ್ಲಿ ಪ್ರಮುಖವಾಗಿದೆ.
ಆದರೆ ಕಾರಡ್ಕ ಗ್ರಾ.ಪಂ. ಹಾಗೂ ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಹೊರತರಲಾದ ಜಾಗೃತಿ ಕರಪತ್ರ ಕನ್ನಡಿಗರಿಗೆ ಅರಿವಾಗದ ಭಾಷೆಯಲ್ಲಿ ಮುದ್ರಿತವಾಗಿದ್ದು, ಕನ್ನಡಿಗರು ಕೊರೋನಾ ವೈರಸ್ ಬಾಧೇಗೊಳಗಾಗಿ ಸಂಕಷ್ಟಕ್ಕೊಳಗಾದರೂ ತೊಂದರೆ ಇಲ್ಲ ಎಂಬ ಧೋರಣೆಯಂತೆ ತೋಚುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಕೊರೋಣ ವೈರಸ್, ಆಶಂಕ ಬೇಡ, ಜಾಗ್ರತಾ ಸಾಕು ಎಂಬ ದಪ್ಪ ಅಕ್ಷರದ ಪದಗಳಿಂದ ಆರಂಭಗೊಳ್ಳುವ ಜಾಗೃತಿ ಪತ್ರ ಮುಂದುವರಿದು ಮಧ್ಯ ಜೈನೆಯಲ್ಲಿ ತುರುಮುಖ ನಗರವಾದ ಗುಹಾನಿಯಿಂದ ರಿಪೋರ್ಟ್ ಮಾಡಿರುವ ಕೊರೋಣ ಇವತ್ತು ಲೋಕ ರಾಜ್ಯಗಳಲ್ಲಿ ಭೀತಿ ಉಂಟುಮಾಡಿದೆ...ಎಂದು ಮುಂದುವರಿಯುತ್ತದೆ. ಜನಸಾಮಾನ್ಯರಿಗೆ ಅರ್ಥವಾಗದ ಮಲೆಯಾಳಿ ಕನ್ನಡದಲ್ಲಿ ಇಂತಹದೊಂದು ಮಾಹಿತಿ ಪತ್ರಿಕೆ ಹೊರತಂದಿರುವುದು ಬಹುಸಂಖ್ಯೆ ಕನ್ನಡಿಗರಿರುವ ಕಾರಡ್ಕ ಗ್ರಾ.ಪಂ. ನ ಕನ್ನಡಿಗರಿಗೆ ಎಸಗಿರುವ ವಂಚನೆಯಾಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


