ಮುಳ್ಳೇರಿಯ/ಕುಂಬಳೆ: ವಿಶ್ವದಾತ್ಯಂತ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ರಾಜ್ಯದಲ್ಲಿ ವ್ಯಾಪಿಸದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮುಂಜಾಗ್ರತಾ ಆದೇಶದ ಮೇರೆಗೆ ಪೂರ್ಣ ಪ್ರಮಾಣದಲ್ಲಿ ವೈರಸ್ ರೋಗ ನಿಯಂತ್ರಣಕ್ಕೆ ಬರುವವರೆಗೆ ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತಾದಿಗಳು ಕ್ಷೇತ್ರ ಭೇಟಿಯನ್ನು ಮುಂದೂಡಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಇತಿಹಾಸ ಪ್ರಸಿದ್ದ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯಕ್ಕೂ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ಹಾಗೂ ಮಧ್ಯಾಹ್ನ 12 ರಿಂದ ಸಂಜೆ 5ರ ವರೆಗೆ ಭಕ್ತರ ಭೇಟಿಯನ್ನು ಮುಂದಿನ ಆದೇಶದ ವರೆಗೆ ನಿರ್ಬಂಧಿಸಲಾಗಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


