ಪೆರ್ಲ: ಮೀನುಗಳು ನಿತ್ಯ ನಿರಂತರ ತಟಾಕದಲ್ಲಿ ಸಂಚರಿಸಿ ನೀರಿನ ಕಷ್ಮಲಗಳನ್ನು ನಿವಾರಿಸಿ ತಮ್ಮ ಜೀವನಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಂತೆ ನಮ್ಮ ಉಳಿವು ಹಾಗೂ ಸುರಕ್ಷಿತ ಬದುಕಿಗೆ ಪೂರಕವಾಗಿ ದೇಶ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದು ಕೊಂಡೆವೂರು ಶ್ರೀಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ಶನಿವಾರ ನಡೆದ 'ಶಿಕ್ಷಣ ದೃಷ್ಟಿ ಮತ್ತು ದಿಕ್ಕು' ಶೈಕ್ಷಣಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜಗತ್ತು ಬಹಳ ಹಿಂದಿನಿಂದಲೂ ಭಾರತವನ್ನು ಗಮನಿಸುತ್ತಿದೆ.ಈಗಲೂ ಗಮನಿಸುತ್ತಿದೆ.ಇಲ್ಲಿನ ಆಧ್ಯಾತ್ಮಿಕ ಚಿಂತನೆಗಳು ದೇಶಕ್ಕೆ ಮಾತ್ರ ಸೀಮಿತವಾಗದೆ ಸಮಸ್ತ ಜಗತ್ತಿನ ಪರವಾಗಿದೆ.ಜಗತ್ತಿಗೆ ಹೆಗಲು ಕೊಟ್ಟು ಜಗತ್ತಿನ ಚಿಂತೆಯನ್ನು ಹೋಗಲಾಡಿಸುವ, ಜಗತ್ತನ್ನು ಸಂರಕ್ಷಿಸುವ ತಾಕತ್ತು ಭಾರತಕ್ಕಿದೆ.ನಮ್ಮ ಮುಂದಿನ ಭಾರತ ಇಲ್ಲಿನ ಪುಟ್ಟ ಮಕ್ಕಳು.ಭಾರತ ಮಾತೆ ಅವರಲ್ಲಿ ಬಹಳಷ್ಟು ನಿರೀಕ್ಷೆ ಇರಿಸಿದ್ದಾಳೆ.ದೇಶದ ನೆಮ್ಮದಿ ಹಾಗೂ ಶಾಂತಿಯನ್ನು ಕಾಯ್ದುಕೊಳ್ಳಲು ಮಕ್ಕಳನ್ನು ಶಾರೀರಿಕ, ಮಾನಸಿಕ ಸದೃಢರನ್ನಾಗಿಸಬೇಕು. ಮಾನವೀಯ ಮೌಲ್ಯ, ಸಂಸ್ಕಾರಗಳನ್ನು ಬೋಧಿಸಿ ಅವರಲ್ಲಿ ವ್ಯಕ್ತಿತ್ವ ರೂಪಿಸುವ, ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ. ಸಮಸ್ತ ವಿಶ್ವವನ್ನೇ ಬದಲಿಸುವ ಸಾಮಥ್ರ್ಯ ಅವರಲ್ಲಿ ಬೆಳೆಸಬೇಕು.ಮಕ್ಕಳಿಂದ ರಕ್ಷಕರಿಗೂ ಸಂಸ್ಕಾರ ಸಿಗುವಂತಾಗಬೇಕು.ನಮ್ಮ ದೇಶದಲ್ಲಿ ಶೇ.95 ಸಜ್ಜನರು, ಶೇ.5 ಮಂದಿ ದುರ್ಜನರಿದ್ದಾರೆ.ಸಜ್ಜನರಲ್ಲಿ ಶೇ.93 ಮಂದಿ ತಮ್ಮಷ್ಟಕ್ಕೇ ನಿಷ್ಕ್ರಿಯರಾಗಿದ್ದಾರೆ.ಶೇ.2 ಮಂದಿ ದೇಶ, ಧರ್ಮ, ಸಂಸ್ಕøತಿಯ ಬಗ್ಗೆ ಕಾಳಜಿ ಹೊಂದಿದ್ದರೂ ದುರ್ಜನರನ್ನು ಸದೆ ಬಡಿಯುವ ತಾಕತ್ತು ಅವರಲ್ಲಿಲ್ಲ.ನಿಷ್ಕ್ರಿಯರಾದ ಸಜ್ಜನರನ್ನು ಬಡಿದೆಬ್ಬಿಸಿದಲ್ಲಿ ಸುಭದ್ರ ರಾಷ್ಟ್ರ ನಿರ್ಮಾಣದ ಕನಸು ನನಸಾಗುವುದು ಎಂದರು.
ದಿಕ್ಸೂಚಿ ಭಾಷಣದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಭಾರತ ಸಂಪದ್ಭರಿತ ದೇಶವೆಂದು ಎಲ್ಲರಿಗೂ ತಿಳಿದ ವಿಚಾರ.ಇಲ್ಲಿನ ಶಿಕ್ಷಣ ವ್ಯವಸ್ಥೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಮೀರಿಸುವ ರೀತಿಯಲ್ಲಿತ್ತು.ವಿಶ್ವವನ್ನೇ ಬೆರಗಾಗಿಸಿದ ಸಾಂಸ್ಕೃತಿಕ ಪರಂಪರೆ ಹಾಗೂ ಶಿಕ್ಷಣ ಪದ್ಧತಿ ಈ ದೇಶದ ಬೆನ್ನೆಲುಬು ಎಂದರು.
ನಾಲಂದಾ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ ಪೆರ್ಲ ವಂದಿಸಿದರು.ಶಿಕ್ಷಕಿ ಶಾಂಭವಿ ನಿರೂಪಿಸಿದರು.


