ನವದೆಹಲಿ: ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಭಾರತ ಅಂತರಾಷ್ಟ್ರೀಯ ವಿಮಾನ ಸೇವೆ ರದ್ದುಗೊಳಿಸಿದ್ದು, ನಿಬರ್ಂಧದ ನಡುವೆಯೂ ಅಮ್ ಸ್ಟರ್ ಡ್ಯಾಂನಿಂದ ಭಾನುವಾರ ದೆಹಲಿ ಆಗಮಿಸಿದ ವಿಮಾನಕ್ಕೆ ದೆಹಲಿಯಲ್ಲಿ ಲ್ಯಾಂಡಿಂಗ್ ಮಾಡಲು ಅನುಮತಿ ನಿರಾಕರಿಸಿದ್ದು, ವಿಮಾನ ವಾಪಸ್ ನೆದರ್ ಲ್ಯಾಂಡ್ ಗೆ ತೆರಳಿದೆ.
ಕೇಂದ್ರ ಸರ್ಕಾರ ಒಂದು ವಾರಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಬಂದ್ ಮಾಡಿದೆ. ಈ ಮಧ್ಯೆ ನಿನ್ನೆ ಅಮ್ ಸ್ಟರ್ ಡ್ಯಾಂನಿಂದ ಹೊರಟಿದ್ದ ಕೆಎಲ್ ಎಂ ವಿಮಾನ ಇಂದು ದೆಹಲಿಗೆ ಆಗಮಿಸಿದ್ದು, ಲ್ಯಾಂಡಿಂಗ್ ಮಾಡಲು ಅನುಮತಿ ನಿರಾಕರಿಸಲಾಗಿದೆ. ವಿಮಾನದಲ್ಲಿ ಓರ್ವ ಗರ್ಭೀಣಿ ಮಹಿಳೆ ಸೇರಿದಂತೆ ಸುಮಾರು 100 ಭಾರತೀಯರಿದ್ದರು ಎನ್ನಲಾಗಿದೆ.ದೆಹಲಿಯಲ್ಲಿ ಲ್ಯಾಂಡಿಂಗ್ ಗೆ ಅನುಮತಿ ಪಡೆಯದಿದ್ದರೂ ವಿಮಾನ ಅಮ್ ಸ್ಟರ್ ಡ್ಯಾಂನಿಂದ ಹೊರಟಿದ್ದು ಏಕೆ ಎಂಬುದು ನಮಗೆ ಗೊತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ನಮಗೆ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ದಯಮಾಡಿ ಸಹಾಯ ಮಾಡಿ. ನನ್ನ ಪತ್ನಿ 6 ತಿಂಗಳು ಗರ್ಭೀಣಿ. ವಿಮಾನ ವಾಪಸ್ ಹೊರಟಿದ್ದರಿಂದ ಅವಳು ತುಂಬಾ ಆತಂಕಕ್ಕೆ ಒಳಗಾಗಿದ್ದಾಳೆ ಎಂದು ಮತ್ತೊಬ್ಬ ಪ್ರಯಾಣಿಕ ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.


