ಕುಂಬಳೆ: ನಾಯ್ಕಾಪು ಸಮೀಪದ ಇಚ್ಲಂಪಾಡಿ ಗ್ರಾಮದ ದರ್ಬಾರ್‍ಕಟ್ಟೆ ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಅಸಂಖ್ಯಾತ ಮಂದಿ ಭಾಕ್ತಾದಿಗಳು ಭಾಗವಹಿಸಿ ಶ್ರೀದೇವಿಯ ದರ್ಶನ ಗೈದು ಕೃತಾರ್ಥರಾದರು.
ಬ್ರಹ್ಮಕಲಶಾಭಿಷೇಕದಂದು ಬೆಳಿಗ್ಗೆ ಕವಾಟೋದ್ಘಾಟನೆ, ಕಣಿದರ್ಶನ, ನಿರ್ಮಾಲ್ಯ ದರ್ಶನ, ತೈಲಪೂರ್ಣ ಕಲಶಾಭಿಷೇಕ, ಪಾಯಸ ಪೂಜೆ, ಕುಂಭೇಶ ಕಲಶಾಭಿಷೇಕ, ಪರಿಕಲಶಾಭಿಷೇಕ ಬಳಿಕ ಬೆಳಗ್ಗೆ ಆವಶ್ರಾವ ಪೆÇ್ರೀಕ್ಷಣಂ, ಮಹಾಪೂಜೆ, ನಿತ್ಯ ನೈಮಿತ್ತಿಕ ನಿಶ್ಚಯಗಳು, ಪ್ರಸಾದ ವಿತರಣೆ, ಮಂಗಲಂ ಮುಂತಾದ ಕಾರ್ಯಕ್ರಮ ನಡೆಯಿತು.
ಸಮಾರೋಪ ದಿನದಂದು ನಡೆದ ಧಾರ್ಮಿಕ ಸಭೆಯನ್ನು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಆಶೀರ್ವಚನ ನೀಡಿ, ಕ್ಷೇತ್ರಗಳ ಅಭಿವೃದ್ಧಿಯಿಂದ ಊರಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಕ್ತಿ ಕೇಂದ್ರಗಳಾದ ಆರಾಧನಾಲಯಗಳು ಧನಾತ್ಮಕ ಚಿಂತನಾ ಕೇಂದ್ರಗಳಾಗಿ ಸಮಗ್ರ ವ್ಯವಸ್ಥೆಗೆ ಪುಷ್ಠಿ ನೀಡುತ್ತದೆ. ಪ್ರತಿಯೊಬ್ಬನ ಅಂತರಂಗದಲ್ಲೂ ಭಗವಂತನ ಬಗೆಗಿನ ಸತ್ ಚಿಂತನೆ ಉದಯಿಸುವಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿರಬೇಕು . ದೇವಾಲಯಗಳ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದು ಅನುಗ್ರಹಿಸಿದರು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕೆ.ಕೆ.ಶೆಟ್ಟಿ, ವಿನಯ ಶೆಟ್ಟಿ, ಮಜುನಾಥ ಆಳ್ವ ಮಡ್ವ ಸಹಿತ ಅನೇಕರು ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕಳತ್ತೂರು ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿಯವರಿಂದ ಭಕ್ತಿ - ಭಾವ - ಗಾನ - ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಅಲ್ಲದೆ ಶ್ರೀಮಧ್ವಾಧೀಶ ವಿಠಲದಾಸರು (ರಾಮಕೃಷ್ಣ ಕಾಟುಕುಕ್ಕೆ) ಇವರಿಂದ ದಾಸವಾಣಿ ಕಾರ್ಯಕ್ರಮವು ಕಳತ್ತೂರು ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿಯ ಪ್ರಾಯೋಜಕತ್ವದಲ್ಲಿ ಜರಗಿತು.


