ಕಾಸರಗೋಡು: ಪೆರಿಯದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯ ಕೇಂದ್ರಕ್ಕೆ ಕೊರೊನಾ ವೈರಸ್ ಪರೀಕ್ಷೆಗಾಗಿರುವ ವಿಶೇಷ ಲ್ಯಾಬ್ ಶೀಘ್ರ ಆರಂಭಗೊಳ್ಳಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಂಗೀಕಾರ ದೊರಕಿದೊಡನೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಬಹುನಿರೀಕ್ಷಿತ ವೈರೋಲಜಿ ಲ್ಯಾಬ್ ಕಾರ್ಯಾರಂಭಗೊಳ್ಳುವುದು.
ಇಂತಹ ಲ್ಯಾಬ್ ಸಾಕಾರವಾದಲ್ಲಿ ಕೋವಿಡ್ 19 ಕೊರೊನಾ ವೈರಸ್ ಪರೀಕ್ಷೆ ಕೇವಲ ಐದು ಗಂಟೆಗಳಲ್ಲಿ ಸಾಧ್ಯವಾಗಲಿದೆ. ಈ ನಿಟ್ಟಿನ ತಾಂತ್ರಿಕ ವ್ಯವಸ್ಥೆಗಳನ್ನು ವಿವಿ ಲ್ಯಾಬ್ ನಲ್ಲಿ ಈಗಾಗಲೇ ಸಜ್ಜೀಕರಿಸಲಾಗಿದೆ. ಪ್ರತಿನಿತ್ಯ 87 ಮಂದಿಗಳ ಮಾದರಿಗಳನ್ನು ಏಕಕಾಲಕ್ಕೆ ಇಲ್ಲಿ ನಿರ್ವಹಿಸಬಹುದಾಗಿದೆ. ಜೊತೆಗೆ ದಿನದ 24 ಗಂಟೆಗಳೂ ಇಲ್ಲಿ ಸೇವೆ ಲಭ್ಯವಾಗಲಿದೆ. ಕೇರಳ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶಾನುಸಾರ ಸಾರ್ವಜನಿಕರಿಗೆ ಈ ಪ್ರಯೋಗಾಲಯದ ಪ್ರಯೋಜನ ಪಡೆಯಬಹುದಾಗಿದೆ. ವಿಶ್ವ ವಿದ್ಯಾನಿಲಯದ ಬಯೋ ಕೆಮಿಸ್ಟ್ರಿ ವಿಭಾಗದ ವ್ಯವಸ್ಥೆಗೊಳಿಸಲಾಗುವ ಈ ಪ್ರಯೋಗಾಲಯದಲ್ಲಿ ಡಾ.ರಾಜೇಂದ್ರ ಪಿಲಾಂಕಟ್ಟೆ ಹಾಗೂ ಇತರ ಪ್ರಾಧ್ಯಾಪಕರೂ, ಸಂಶೋಧನಾ ವಿದ್ಯಾರ್ಥಿಗಳು ಇಂತಹ ವಿಶಿಷ್ಟ ಪ್ರಯೋಗಾಲಯವೊಂದನ್ನು ಕಾಸರಗೋಡಿನಲ್ಲೂ ಸಾಕ್ಷಾತ್ಕರಿಸಲು ಅಹರ್ನಿಶಿ ದುಡಿಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಕೇಂದ್ರೀಯ ವಿವಿ ಉಪಕುಲಪತಿ ಡಾ.ಗೋಪಕುಮಾರ್ ಸಮಗ್ರ ಮಾಹಿತಿ ನೀಡಿದ್ದು, ಪ್ರಯೋಗಾಲ ಶೀಘ್ರ ಕಾರ್ಯಾರಂಭಗೊಳ್ಳಲಿದೆ. ಪ್ರಸ್ತುತ ಆಲಪ್ಪುಳದಲ್ಲಿ ಮಾತ್ರ ಇಂತಹ ಸೌಕರ್ಯವಿರುವ ಪ್ರಯೋಗಾಲಯ ಇರುವುದಾಗಿದೆ. ಇಂತಹ ಪ್ರಯೋಗಾಲಯದಿಂದ ಕಾಸರಗೋಡು ಸಹಿತ ಮಲಬಾರ್ ವಲಯದ ಇತರ ಜಿಲ್ಲೆಗಳಿಗೂ ಪ್ರಯೋಜನಕರವಾಗಲಿದೆ.


