ತಿರುವನಂತಪುರ: ಕೇರಳದಲ್ಲಿ ಐದು ಮಂದಿಗೆ ಕರೊನಾ ವೈರಸ್ ಬಾಧಿಸಿರುವುದು ಖಚಿತಗೊಂಡಿದೆ. ಆರೋಗ್ಯ ಇಲಾಖೆ ನೀಡಿರುವ ನಿರ್ದೇಶ ಪಾಲಿಸದಿರುವುದು ವೈರಸ್ ವ್ಯಾಪಿಸಲು ಕಾರಣವಾಗಿರುವುದಾಗಿ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ಭಾನುವಾರ ತಿರುವನಂತಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಟೆಲಿಯಿಂದ ಆಗಮಿಸಿದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಮಾಹಿತಿ ನೀಡದಿರುವುದರಿಂದ ಇವರ ಸಂಬಂಧಿಕರಿಗೂ ವೈರಸ್ ತಗುಲಿತ್ತು. ಇಬ್ಬರು ಜ್ವರ ಬಾಧಿಸಿ ಆಸ್ಪತ್ರೆಗೆ ತೆರಳಿದಾಗ ತಪಾಸಣೆ ಸಂದರ್ಭ ವೈರಸ್ ಪತ್ತೆಯಾಗಿದೆ. ಆರಂಭದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದರೂ, ಬಲವಂತವಾಗಿ ತಪಾಸಣೆಗೆ ಒಳಪಡಿಸಿದಾಗ ವೈರಸ್ ತಗುಲಿರುವುದು ಪತ್ತೆಯಾಗಿದೆ. ವೈರಸ್ ಬಾಧಿತ ಪ್ರದೇಶದಿಂದ ಆಗಮಿಸುವವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ನೀಡಿದ್ದ ನಿರ್ದೇಶ ಇವರು ಪಾಲಿಸಿರಲಿಲ್ಲ. ವೈರಸ್ ಬಾಧಿತರು ಪತ್ತನಂತಿಟ್ಟ ಜಿಲ್ಲೆಯವರಾಗಿದ್ದಾರೆ. ಇವರು ತೆರಳಿರುವ ಪ್ರದೇಶ ಹಾಗೂ ಸಂಪರ್ಕದಲ್ಲಿದ್ದವರನ್ನು ಪತತೆಹಚ್ಚಲು ಆರೋಗ್ಯ ಇಲಾಖೆ ಶ್ರಮ ನಡೆಸಿದೆ. ಫೆಬ್ರವರಿ 29ರಂದು ಇಟೆಲಿಯಿಂದ ಈ ಇಬ್ಬರೂ ಆಗಮಿಸಿರುವ ವಿಮಾನದಲ್ಲಿದ್ದವರನ್ನು ಪತ್ತೆಹಚ್ಚಿ ಆಯಾ ಜಿಲ್ಲೆಯ ಕಂಟ್ರೋಲ್ ರೂಂ ಸಂಪರ್ಕಿಸುವಂತೆಯೂ ಸೂಚಿಸಲಾಗಿದೆ.
ಮಾರ್ಚ್ 9ರಂದು ಪ್ರಸಿದ್ಧ ಆಟ್ಟುಕ್ಕಾಲ್ ಭಗವತೀ ಪೊಂಗಾಲಂ ಉತ್ಸವ ನಡೆಯಲಿದ್ದು, ಕರೊನಾ ವೈರಸ್ ಭೀತಿ ಎದುರಾಗಿದೆ. ಲಕ್ಷಾಂತರ ಭಕ್ತಾದಿಗಳು ಇಲ್ಲಿ ಒಟ್ಟು ಸೇರುತ್ತಿದ್ದಾರೆ.

