ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವು ಮುಜುಂಗಾವಿನ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮತ್ತು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಸಹಭಾಗಿತ್ವದಲ್ಲಿ ನಡೆಯಿತು. ಬೆಳಿಗ್ಗೆ ನಡೆದ ಸರಳ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‍ನ ವಿಶ್ವಸ್ಥ ಮೋನಪ್ಪ ಭಂಡಾರಿಯವರು ದೀಪ ಪ್ರಜ್ವಾಲನೆಗೈದು ಶಿಬಿರಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನೇತ್ರಚಿಕಿತ್ಸಾಲಯದ ಆಡಳಿತಾಧಿಕಾರಿ ಲಯನ್ ಡಾ. ಶ್ರೀಧರ ಭಟ್ ಉಪ್ಪಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 586ನೆಯ ಈ ಶಿಬಿರದ ಮೂಲಕ ನೇತ್ರ ಸಮಸ್ಯೆ ಹೋಗಲಾಡಿಸಿ, ಸ್ವಾವಲಂಬಿಯಾಗಿ ಬದುಕಬೇಕೆಂದು ಕರೆ ನೀಡಿದರು. ಉಪಸ್ಥಿತರಿದ್ದ ನೇತ್ರತಜ್ಞ ಡಾ.ಆನಂದ್ ರವರು ಒತ್ತಡ ರಹಿತ ಜೀವನ ನಡೆಸಿದರೆ ಕಣ್ಣಿನ ಪೊರೆ ಸಮಸ್ಯೆಯಾಗಲಾರದೆಂದು ಸಲಹೆ ನೀಡಿದರು.
ಮೋನಪ್ಪ ಭಂಡಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವನದ ಅಂಧಕಾರವನ್ನು ತೊಡೆದು ವಿದ್ಯಾವಂತರಾದ ನಾವು ಶರೀರದ ಮುಖ್ಯ ಅಂಗವಾದ ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವಲ್ಲಿ ಈ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು.ಸ್ಮಿತಾ ಮತ್ತು ಕು.ಪ್ರಜ್ಞಾ ಕೊಂಡೆವೂರು ಪ್ರಾರ್ಥನೆಗೈದರು. ಆಶ್ರಮದ ಆರೋಗ್ಯ ವಿಭಾಗದ ಪ್ರಮುಖ ರಾಮಚಂದ್ರ ಬಲ್ಲಾಳ ಅವರು ಸ್ವಾಗತಿಸಿ, ಉದಯಕುಮಾರ್ ಶೆಟ್ಟಿ ವಂದಿಸಿದರು. ಹರೀಶ್ ಮಾಡ ನಿರೂಪಿಸಿದರು. ಶಿಬಿರದಲ್ಲಿ 100ಕ್ಕೂ ಅಧಿಕ ಮಂದಿ ಪಾಲ್ಗೊಂಡು ಸದುಪಯೋಗವನ್ನು ಪಡಕೊಂಡರು.


