ಮಂಜೇಶ್ವರ: ಜಿಲ್ಲೆಯ ಗಡಿ ಭಾಗದಲ್ಲಿ ಚಿಕಿತ್ಸೆ ಲಭಿಸದೆ ಮತ್ತೊಂದು ಸಾವು ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯ ಗಡಿ ಭಾಗದಲ್ಲಿ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದವರ ಸಂಖ್ಯೆ ಹದಿಮೂರಕ್ಕೇರಿದೆ. ಉಪ್ಪಳ ನಿವಾಸಿ ಅಬ್ದುಲ್ ಸಲೀಮ್(56) ಸರಿಯಾದ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದ ದುರ್ದೈವಿ. ಬುಧವಾರ ತಡ ರಾತ್ರಿ ಇವರು ಕೊನೆಯುಸಿರೆಳೆದಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಲೀಂ ಅವರನ್ನು ಎರಡು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದ ಹಿನ್ನೆಲೆಯಲ್ಲಿ ಪುನಃ ಹಿಂತಿರುಗಬೇಕಾಯಿತೆಂದು ಕುಟುಂಬಸ್ಥರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಇದೀಗ ಸುಪ್ರೀಂ ಕೋರ್ಟಿನ ಆದೇಶದ ಬಳಿಕ ಉನ್ನತ ಚಿಕಿತ್ಸೆಗಾಗಿ ಗಡಿ ಪ್ರದೇಶಕ್ಕೆ ತಲುಪುತ್ತಿರುವ ರೋಗಿಗಳನ್ನು ತಲಪಾಡಿಯಿಂದ ಪೆÇಲೀಸರು ಹಿಂದಕ್ಕೆ ಕಳುಹಿಸದೆ ನೇರವಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸುತ್ತಾರೆಂಬುದು ಕೇವಲ ಮಾತಿನಲ್ಲೇ ಉಳಿದಿರುವುದಾಗಿ ರೋಗಿಗಳ ಸಂಬಂಧಿಕರು ಹೇಳುತ್ತಿದ್ದಾರೆ.
ಮಂಗಳೂರು ಆಸ್ಪತ್ರೆಗೆ ಸಾಗಲು ತೆರಳಿದ ಹಲವಾರು ರೋಗಿಗಳನ್ನು ಬುಧವಾರ ಸಣ್ಣ ಕಾರಣಗಳನ್ನು ಮುಂದಿಟ್ಟು ಪೆÇಲೀಸರು ಹಿಂತಿರುಗಿ ಕಳಿಸಿರುವುದು ಕಂಡುಬಂದಿತ್ತು.
ತುರ್ತು ಚಿಕಿತ್ಸೆಗಾಗಿ ಹಾಗೂ ಅಪಘಡಕ್ಕೀಡಾಗಿರುವ ರೋಗಿಗಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲು ಅಡ್ಡಗಾಲು ಹಾಕದೆಂದು ಕರ್ನಾಟಕ ಸರ್ಕಾರ ಕೇರಳ ಸರ್ಕಾರಕ್ಕೆ ವಾಗ್ದಾನ ನೀಡಿತ್ತು. ಆದರೆ ಬುಧವಾರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ರೋಗಿಯಾದ ತಳಂಗರೆ ನಿವಾಸಿ ಸ್ತ್ರೀಯೊಬ್ಬರನ್ನು ಪೆÇಲೀಸರು ಕೊನೆಗೂ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದರೂ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂಧಿಗಳು ಒಂದೂವರೆ ತಾಸು ನಿಲ್ಲಿಸಿ ಬಳಿಕ ಚಿಕಿತ್ಸೆ ನೀಡದೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಯಾವುದೇ ತಪಾಸಣೆಗೂ ಆಸ್ಪತ್ರೆ ಅಧಿಕೃತರು ಮುಂಸದಾಗಿಲ್ಲ ಎಂದು ದೂರಲಾಗಿದೆ.
ಕಾಞಂಗಾಡ್ ಚೆಕನ್ನೂರು ನಿವಾಸಿಯಾದ ಪ್ರಕಾಶ್ ಎಂಬವರ ಪತ್ನಿಯನ್ನು ರಾಕ್ತಸ್ರಾವದಿಂದಾಗಿ ದೇರಳಕಟ್ಟೆ ಕೆ.ಎಸ್.ಹೆಗ್ದೆ ಆಸ್ಪತ್ರೆಗೆ ತಲುಪಿಸಲಾಯಿತಾದರು ಶಸ್ತ್ರಚಿಕಿತ್ಸಾ ಘಟಕ ಕಾರ್ಯಾಚರಿಸುವುದಿಲ್ಲ ಎಂಬ ಕಾರಣ ನೀಡಿ ಹಿಂದೆ ಕಳಿಸಲಾಗಿದೆ ಎಂದು ದೂರಲಾಗಿದೆ.


