ಕಾಸರಗೋಡು: ಕೋವಿಡ್ 19 ಸೋಂಕು ಬಾಧಿತರ ಶುಶ್ರೂಷೆ ನಡೆಸುವಲ್ಲಿ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಶೇ 100 ಅಂಕ ನೀಡಬಹುದು ಎಂದು ಮಿನ್ ಶಾದ್ ತಿಳಿಸುತ್ತಾರೆ.
ಕೋವಿಡ್ 19 ಸೋಂಕು ಖಚಿತಗೊಂಡ ಪರಿಣಾಮ ಉದುಮಾ ಮುಲಚ್ಚೇರಿ ನಿವಾಸಿ, 31 ವರ್ಷ ಪ್ರಾಯದ ಎಸ್. ಮಿನ್ ಶಾದ್ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದವರು, ಏ.10ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈಗ ಜಿಲ್ಲೆಯಲಲಿ ಹೆಚ್ಚಳಗೊಳ್ಳುತ್ತಿರುವ ಸೋಂಕಿನ ನಡುವೆಯೂ ಪ್ರತಿ ರೋಗಿಯ ಬಗ್ಗೂ ಅತ್ಯಂತ ಕಾಳಜಿ ಹೊಂದಿರುವ ಆಸ್ಪತ್ರೆಯ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಈ ಅಹೋರಾತ್ರಿ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೆ ಸಾಲದು ಎಂದವರು ತಿಳಿಸುತ್ತಾರೆ.
ಮಾ.21ರಂದು ತಡರಾತ್ರಿ ಕೊಲ್ಲಿ ರಾಷಟ್ರದ ನೈಫ್ ವಲಯದಿಂದ 4 ಮಂದಿ ಗೆಳೆಯರೊಂದಿಗೆ ಮಿನ್ ಶಾದ್ ನೆಡುಂಬಾಶ್ಶೇರಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಅವರ ಸ್ಯಾಂಪ್ ಸಂಗ್ರಹಿಸಿ ಆಂಬುಲೆನ್ಸ್ ಮೂಲಕ ಮನೆಗೆ ಕರೆತರಲಾಗಿತ್ತು. ಮಿನ್ ಶಾದ್ ಅವರಿಗೆ ರೋಗ ಶಂಕೆಯ ವೇಳೆಗೇ ಅವರ ತಾಯಿ, ಸಹೋದರನನ್ನು ಮೊದಲೇ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿತ್ತು.
ಈಗ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ನೇರವಾಗಿ ಮುಲ್ಲಚ್ಚೇರಿಯ ಮನೆಗೆ ಅವರು ತೆರಳಿದಾರೆ. ಅಲ್ಲಿ ರೋಗ ಶಂಕೆಯ ಇಬ್ಬರು ಗೆಳೆಯರು ಮಾತ್ರ ಇದ್ದಾರೆ.
ರೋಗದಿಂದ ಗುಣಮುಖರಾದರೂ 30 ದಿನ ಪ್ರಾಯವಿರುವ ತಮ್ಮ ಎರಡನೇ ಮಗುವನ್ನು ನೋಡುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಇನ್ನೂ ಕೆಲವು ದಿನ ಕಳೆಯಬೇಕಿದೆ. ಇನ್ನು 14 ದಿನ ಅವರ ರೂಂ ಕ್ವಾರೆಂಟದಲ್ಲಿ ಇರುವಂತೆ ವೈದ್ಯರು ಸಲಹೆಮಾಡಿದ್ದಾರೆ. ಪತ್ನಿ, ನವಜಾತ ಶಿಶು ಮತ್ತು ಮೂರೂವರೆ ವರ್ಷದ ಪುತ್ರಿ ಕೋಳಿಯಡ್ಕದ ತಾಯಿ ಮನೆಯಲ್ಲಿದ್ದಾರೆ.


