ಮಂಜೇಶ್ವರ: ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರ್ಕಾರ ಉಚಿತವಾಗಿ ನೀಡಲಾಗುತ್ತಿರುವ ಪೆಡಿತರ ಸಾಮಾಗ್ರಿಗಳನ್ನು ಪಡೆಯಲು ಗಡಿ ಪ್ರದೆಶವಾದ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ವಿವಿಧ ಪಡಿತರ ಅಂಗಡಿಗಳಲ್ಲಿ ಕಿಕ್ಕಿರಿದ ಜನರು ಸೇರಿರುವುದು ಕಂಡು ಬಂದಿದೆ.
ಕೆಲವೊಂದು ಅಂಗಡಿಗಳ ಮುಂಭಾಗದಲ್ಲಿ ಬೆಳಿಗ್ಗೆ ಒಂಭತ್ತು ಗಂಟೆಗೆ ಮುಂಚಿತವಾಗಿಯೇ ಜನರು ಸೇರಿರುವುದು ಕಂಡು ಬರುತ್ತಿದೆ. ಆದರೆ ಗಡಿ ಪ್ರದೆಶದ ಎಲ್ಲಾ ರೇಶನ್ ಅಂಗಡಿಗಳು ಬೆಳಿಗ್ಗೆ ಹನ್ನೊಂದು ಗಂಟೆಯ ಬಳಿಕ ತೆರೆಯುತ್ತದೆ. ಕರೋನಾ ವೈರಸ್ ಹರಡದಂತೆ ಅಂತರವನ್ನು ಪಾಲಿಸಲು ನಿರಂತರವಾಗಿ ನಿರ್ದೇಶವನ್ನು ನೀಡುತಿದ್ದರೂ ರೇಶನ್ ಅಂಗಡಿಗಳಲ್ಲಿ ಇದರ ಪಾಲನೆ ಕಂಡು ಬರುತ್ತಿಲ್ಲ. ಇಲ್ಲಿ ಸೇರುತ್ತಿರುವ ಗ್ರಾಹಕರುಗಳನ್ನು ನಿಯಂತ್ರಿಸಲು ಕಾನೂನು ಪಾಲಕರನ್ನು ನಿಯೋಗಿಸಿದ್ದರೂ ಗುಂಪು ಗುಂಪಾಗಿ ಅಂತರವಿಲ್ಲದೆ ಹತ್ತಿರ ಹತ್ತಿರವೇ ನಿಂತುರುವ ದೃಶ್ಯ ಕಂಡುಬರುತ್ತಿದೆ.
ಜೊತೆಗೆ ಮಂಜೇಶ್ವರ ಗ್ರಾಮ ಪಂ. ವ್ಯಾಪ್ತಿಯಲ್ಲಿರುವ ಕೆಲವೊಂದು ರೇಶನ್ ಅಂಗಡಿಗಳಲ್ಲಿ ಗ್ರಾಹಕರನ್ನು ತೂಕದಲ್ಲಿಯೂ ವಂಚಿಸುತ್ತಿರುವ ದೂರುಗಳು ಕೂಡಾ ಕೇಳಿ ಬರುತ್ತಿವೆ. ಕೋವಿಡ್‍ನ ಆರಂಭದ ದಿನಗಳಲ್ಲಿ ಕೆಲವೊಂದು ವ್ಯಾಪಾರಿಗಳು ಗ್ರಾಹಕರಿಂದ ದುಪ್ಪಟ್ಟು ಹಣ ಪಡೆಯುತ್ತಿರುವ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಹಲವು ಅಂಗಡಿಗಳಿಗೆ ದಾಳಿ ನಡೆದಿರುವುದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.
ಸಾಮೂಹಿ ಅಂತರವನ್ನು ಪಾಲಿಸುವುದರ ಭಾಗವಾಗಿ ರೇಶನ್ ಅಂಗಡಿಗಳಲ್ಲಿ ಕೇವಲ ಐದು ಜನರಂತೆ ಅಂತರವನ್ನು ಪಾಲಿಸಿ ನೀಡಬೇಕೆಂಬ ನಿರ್ದೇಶನವಿದ್ದರೂ ಗಡಿ ಪ್ರದೇಶದಲ್ಲಿ ಅದು ಪಾಲನೆಯಾಗುತ್ತಿಲ್ಲವೆಂದು ತಿಳಿದುಬಂದಿದೆ. ರೇಶನ್ ಅಂಗಡಿಗಳಲ್ಲಿ ಜನಪ್ರತಿನಿಧಿಗಳು ವಿತರಣೆಯಲ್ಲಿ ಸಹಕರಿಸುತ್ತಿರುವ ದೃಶ್ಯ ಕಂಡು ಬಂದಿದೆ.


