ನವದೆಹಲಿ: ಲಾಕ್ ಡೌನ್‍ನಲ್ಲಿರುವ 130 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ 9ರ ವೇಳೆ ಹೊಸ ಸಂದೇಶ ನೀಡಿದ್ದಾರೆ.
ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ನಿಮ್ಮ ಅಮೂಲ್ಯ ಸಮಯ ನನಗೆ ಬೇಕು ಎಂದು ಪ್ರಧಾನಿ ಮೋದಿ 130 ಕೋಟಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್ ಆರಿಸಿ, ಮೊಬೈಲ್ ಟಾರ್ಚ್ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ದೇಶದಲ್ಲಿ ಯಾರೂ ಕೂಡ ಒಂಟಿ ಅಲ್ಲ, ದೇಶದ 130 ಕೋಟಿ ಜನರು ಒಂದೇ ಸಂಕಲ್ಪ ತೊಟ್ಟಿದ್ದಾರೆ, ಕೊರೊನಾವನ್ನು ಮಟ್ಟ ಹಾಕಲು ಸಾಮಾಜಿಕ ಅಂತರವೇ ರಾಮಬಾಣ. ದೇಶದಲ್ಲಿ ಎಲ್ಲರೂ ಒಂದುಗೂಡಿದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯ, ಜನತಾ ರೂಪದಲ್ಲಿ ಮಹಾ ಶಕ್ತಿಯ ವಿರಾಟ ರೂಪದ ಸಾಕ್ಷಾತ್ಕಾರವಾಗಬೇಕಿದೆ, ಕೊರೊನಾ ಎಂಬ ಅಂಧಕಾರದಿಂದ ಪ್ರಕಾಶದೆಡೆಗೆ ಹೋಗಬೇಕು. ನಾಲ್ಕೂ ದಿಕ್ಕಿನಲ್ಲೂ ನಮ್ಮ ಶಕ್ತಿಯನ್ನು ತೋರಿಸಬೇಕಿದೆ. ನೀವು ಮನೆಯಲ್ಲಿ ಲೈಟ್ ಆಫ್ ಮಾಡಿ, ಮನೆಯ ಹೊರಗಡೆ ಬಾಲ್ಕನಿಯಲ್ಲಿ, ಮನೆಯ ಬಾಗಿಲಿನಲ್ಲಿ ಎಲ್ಲೇ ನಿಂತು, ಮೊಂಬತ್ತಿ, ಮೊಬೈಲ್, ಲೈಟ್, ದೀಪವನ್ನು ಹಚ್ಚಬಹುದು. ಆದರೆ ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಎನ್ನುವ ಲಕ್ಷ್ಮಣ ರೇಖೆಯನ್ನು ಮಾತ್ರ ದಾಟಬೇಡಿ. ಎಲ್ಲರೂ ಒಂದೇ ಕಡೆ ನಿಲ್ಲುವುದು ಬೇಡ. ನಾವು ಲಾಕ್‍ಡೌನ್‍ನಲ್ಲಿ ಇದ್ದೇವೆ ನಿಜ ಕೊರೊನಾವನ್ನು ಹೋಗಲಾಡಿಸಲು ಅದು ಅನಿವಾರ್ಯ, ಹಾಗೆಂದ ಮಾತ್ರಕ್ಕೆ ಯಾರೂ ಒಬ್ಬಂಟಿಯಾಗಿಲ್ಲ, ದೇಶದ ಎಲ್ಲಾ 130 ಕೋಟಿ ಜನರು ಒಗ್ಗಟ್ಟಾಗಿದ್ದೇವೆ, ಎಲ್ಲರಲ್ಲೂ ಒಂದೇ ಸಂಕಲ್ಪವಿದೆ.
ಏಪ್ರಿಲ್ 5 ರಂದು ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ಮನೆಯ ಹೊರಗೆ ಬಂದು ದೀಪವನ್ನು ಬೆಳಗಿ, ಈ ದೀಪದ ಪ್ರಕಾಶತೆಗೆ ಕೊರೊನಾವೂ ಕೂಡ ಓಡಿಹೋಗುತ್ತದೆ. ಹಾಗೂ ಸರ್ಕಾರದ ಈ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡುತ್ತೇವೆ ಎನ್ನುವ ಭರವಸೆ ಇದೆ ಎಂದು ಮೋದಿ ತಿಳಿಸಿರುವರು.


