ಕಾಸರಗೋಡು: ಕೋವಿಡ್-19 ಬಾಧಿಸಿ ನೂರಾರು ಮಂದಿಯ ಸಂಪರ್ಕಕ್ಕೆ ಕಾರಣರಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಗರದ ಎರಿಯಾಲ್ ನಿವಾಸಿ ಕೆ.ಸಿ ಅಬ್ದುಲ್ ಅಮೀರ್ ಒಳಗೊಂಡಂತೆ 23ಮಂದಿ ಭಾನುವಾರ ಒಂದೇ ದಿನ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ. ಈ ಮೂಲಕ ಕಾಸರಗೋಡು ಜನರಲ್ ಆಸ್ಪತ್ರಯಲ್ಲಿ ಕೇವಲ 50ಮಂದಿ ಮಾತ್ರ ಬಾಕಿ ಉಳಿದ್ದಿದ್ದು, ಕೆಲವೇ ದಿವಸಗಳಲ್ಲಿ ಇವರೂ ಗುಣಮುಖರಾಗಿ ತೆರಳುವ ಸಾಧ್ಯತೆಯಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಎರಿಯಾಲ್ ನಿವಾಸಿಗೆ ಕೋವಿಡ್-19 ತಗುಲಿರುವ ಮಾಹಿತಿ ಲಭಿಸುತ್ತಿದ್ದಂತೆ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಮಂದಿಯನ್ನು ಮನೆ ಹಾಗೂ ಆಸ್ಪತ್ರೆಗಳಲ್ಲಿ ನಿಗಾದಲ್ಲಿರಲು ಕಳುಹಿಸಲಾಗಿತ್ತು. ಇದರಲ್ಲಿ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್, ಕೋಯಿಕ್ಕೋಡ್ ಕರಿಪ್ಪೂರ್ ವಿಮಾನ ನಿಲ್ದಾಣ ಕಸ್ಟಂಸ್ ಅಧಿಕಾರಿ ಒಳಗೊಂಡಂತೆ ನೂರಾರು ಮಂದಿ ಹೋಮ್ ಕ್ವಾರಂಟೈನ್‍ನಲ್ಲಿ ಕಳೆದಿದ್ದು, ಪ್ರಸಕ್ತ ಇವೆಲ್ಲರ ತಪಾಸಣಾ ವರದಿ ನೆಗೆಟಿವ್ ಆಗಿರುವುದು ಸಮಾಧಾನ ತಂದುಕೊಟ್ಟಿದೆ. ಜಿಲ್ಲೆಯಲ್ಲಿ ಹೆಚ್ಚಿನ ಆತಂಕ ತಂದುಕೊಟ್ಟಿದ್ದ ಎರಿಯಾಲ್ ನಿವಾಸಿಯ ಕೋವಿಡ್-19 ಪೋಸೆಟಿವ್ ಪ್ರಕರಣದಿಂದ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಪರೀಕ್ಷೆಗಳನ್ನುಮುಂದೂಡುವುದರ ಜತೆಗೆ ವ್ಯಾಪಾರ ವಹಿವಾಟುಗಳಿಗೆ ನಿಯಂತ್ರಣ ತಂದುಕೊಳ್ಳಲಾಗಿತ್ತು.
ಪ್ರಸ್ತುತ ಜನರಲ್ ಆಸ್ಪತ್ರೆಯಲ್ಲಿ 48 ಮಂದಿ ಮಾತ್ರ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 12, ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 8, ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 14, ಪಡನ್ನಕ್ಕಾಡ್ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು, ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ 20ಮಂದಿ ಚಿಕಿತ್ಸೆಯಲ್ಲಿ ಕಳೆಯುತ್ತಿದ್ದಾರೆ.

