ಕಾಸರಗೋಡು: ಕೃಷಿಕರಿಂದ ಅಡಕೆ ಸಂಗ್ರಹಿಸುವ ನಿಟ್ಟಿನಲ್ಲಿ ಕ್ಯಾಂಪೆÇ್ಕೀ ಸಂಸ್ಥೆಗೆ ಲಾಕ್ ಡೌನ್ ಆದೇಶದಿಂದ ವಾರಕ್ಕೊಂದು ದಿನ ರಿಯಾಯಿತಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಏಪ್ರಿಲ್ 15ರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಈ ಸಂಸ್ಥೆ ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಬೆಂಬಲ:
ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಮಂಗಲ್ಪಾಡಿ ಗ್ರಾಮಪಂಚಾಯತ್ ನ 5 ನೇ ವಾರ್ಡ್ ಅಲ್ ನವಾಝ್ ಕುಟುಂಬಶ್ರೀ ನೆರೆಕೂಟ ಹೆಗಲು ನೀಡಿದೆ. ಈಘಟಕ 10ಸಾವಿರ ರೂ. ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ ದೇಣಿಗೆ ನೀಡುವ ಉದ್ದೇಶದಿಂದ ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಸುರೇಂದ್ರನ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಂಗಲ್ಪಾಡಿ ಕೈಕಂಬದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಷಾಹುಲ್ ಹಮೀದ್ ಬಂದ್ಯೋಡು, ಸಿ.ಡಿ.ಎಸ್. ಅಧ್ಯಕ್ಷೆ ಸುಶೀಲಾ, ಕುಟುಂಬಶ್ರೀ ನೆರೆಕೂಟ ಅಧ್ಯಕ್ಷೆ ನಜುಮುನ್ನೀಸಾ, ಕಾರ್ಯದರ್ಶಿ ಖದೀಜತ್ ಕುಬ್ರಾ ಮೊದಲಾದವರು ಉಪಸ್ಥಿತರಿದ್ದರು.


