HEALTH TIPS

ಕಟ್ಟುನಿಟ್ಟಿನ ಲಾಕ್ ಡೌನ್ ವ್ಯವಸ್ಥೆ, ಇಲಾಖೆಗಳ ಸಹಕಾರ-ಕೇರಳದಲ್ಲಿ ನಿಯಂತ್ರಣದತ್ತ

       
          ಕಾಸರಗೋಡು: ಕೇರಳ ಸರ್ಕಾರದ ಕಟ್ಟುನಿಟ್ಟಿನ ಲಾಕ್ ಡೌನ್ ವ್ಯವಸ್ಥೆ, ಪೊಲೀಸ್, ಆರೋಗ್ಯ ಇಲಾಖೆಯ ಕಾರ್ಯತತ್ಪರತೆ ಹಾಗೂ ಪ್ರತ್ಯೇಕ ಕ್ರಿಯಾ ಯೋಜನೆಯನ್ನು ದಕ್ಷತೆಯೊಂದಿಗೆ ಜಿಲ್ಲೆಯಲ್ಲಿ ಜಾರಿಗೊಳಿಸಿ ಕೊರೋನಾ ಹರಡುವಿಕೆ ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಾಗಿದೆ.
      ಕಾಸರಗೋಡು ಜಿಲ್ಲೆಯಲ್ಲಿ ದೇಶವನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ ಕೋವಿಡ್-19 ವೈರಸ್ ವ್ಯಾಪಿಸುತ್ತಿರುವುದನ್ನು ಮನಗಂಡ ಕೇರಳ ಸರ್ಕಾರ ಮಾರ್ಚ್ 19ರಂದು ಲಾಕ್‍ಡೌನ್ ವ್ಯವಸ್ಥೆ ಜಾರಿಗೊಳಿಸಿತ್ತು. ಮಾ. 24ರಿಂದ ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದ ಸಂಪೂರ್ಣ ಲಾಕ್‍ಡೌನ್ ವ್ಯವಸ್ಥೆ, ಜತೆಗೆ ಪೊಲೀಸ್, ಆರೋಗ್ಯ ಸ್ಥಳೀಯಾಡಳಿತ ಸಂಸ್ಥೆ ಒಳಗೊಂಡಂತೆ ವಿವಿಧ ಇಲಾಖೆಗಳ ಕಾರ್ಯತತ್ಪರತೆ ಕಾಸರಗೋಡು ಜಿಲ್ಲೆ ಸಹಿತ ಕೇರಳದಲ್ಲಿ ಕೋವಿಡ್-19 ವ್ಯಾಪಿಸುವುದನ್ನು ಸಮರ್ಥವಾಗಿ ತಡೆಗಟ್ಟಲು ಸಾಧ್ಯವಾಗಿದೆ ಎಂಬುದಾಗಿ ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.
      ವಿದೇಶದಿಂದ ಆಗಮಿಸಿದವರಲ್ಲಿ ಹಾಗೂ ಇವರ ಸಂಪರ್ಕದಿಂದ ವೈರಸ್ ವ್ಯಾಪಿಸಿರುವುದನ್ನು ಖಚಿತಪಡಿಸಲಾಗಿತ್ತು. ವಿದೇಶದಿಂದ ಆಗಮಿಸಿದವರು ಹೋಮ್ ಕ್ವಾರಂಟೈನ್‍ನಲ್ಲಿ ಕಳೆಯುವಂತೆ ಆರೋಗ್ಯ ಇಲಾಖೆ ನೀಡಿದ್ದ ನಿರ್ದೇಶ ಪಾಲಿಸದೆ, ಕಾಸರಗೋಡು ಎರಿಯಾಲ್ ನಿವಾಸಿ ಸಹಿತ ಹಲವು ಮಂದಿ ಸಾಮಾಜಿಕ ಸಂಪರ್ಕ ಸಾಧಿಸಿದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕರೊನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾಗಿತ್ತು.
       ಕೇರಳದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ವೈರಸ್ ವ್ಯಾಪಿಸಿದ್ದರೂ, ಕಾಸರಗೋಡಿನ ಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದ್ದಂತೆ ಸರ್ಕಾರ ಕಟ್ಟುನಿಟ್ಟಿನ ಲಾಕ್‍ಡೌನ್ ಕ್ರಮಕ್ಕೆ ಮುಂದಾಗಿತ್ತು.  ಜಿಲ್ಲಾಡಳಿತೆಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವ ನಿಟ್ಟಿನಲ್ಲಿ ಉದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅಲ್‍ಕೇಷ್ ಕುಮಾರ್ ಶರ್ಮ ಅವರನ್ನು ಕೋವಿಡ್-19 ನಿಯಂತ್ರಣಕ್ಕಾಗಿ ಕಾಸರಗೋಡು ಜಿಲ್ಲೆಗೆ  ಪ್ರತ್ಯೇಕ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಲಾಕ್‍ಡೌನ್ ಪ್ರಬಲವಾಗಿಜಾರಿಗೊಳಿಸುವ ನಿಟ್ಟಿನಲ್ಲಿ ಎರ್ನಾಕುಲಂ ನಗರ ಪೊಲೀಸ್ ಆಯುಕ್ತರಾದ  ವಿಜಯ್ ಸಖಾರೆ , ಉತ್ತರ ವಲಯ ಐ.ಜಿ. ಅಶೋಕ್ ಯಾದವ್ ,ಮಹಿಳಾ ಕಮಾಂಡೆಂಟ್ ಎಸ್.ಪಿ. ಡಿ.ಶಿಲ್ಪಾ ಅವರನ್ನೂ ಕಾಸರಗೋಡು ಜಿಲ್ಲೆಗೆ ಕರ್ತವ್ಯಕ್ಕಾಗಿ ಮುಖ್ಯಮಂತ್ರಿ ನೇಮಿಸಿದ್ದರು.ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರ, ಸಾರ್ವಜನಿಕರ ಬೆಂಬಲದೊಂದಿಗೆ ಲಾಕಡೌನ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿತ್ತು. ಕಾಸರಗೋಡು ನಗರಸಭೆ ಹಾಗೂ ಆಸುಪಾಸಿನ ಏಳು ಪಂಚಾಯಿತಿಗಳಲ್ಲಿ  ಟ್ರಿಪಲ್ ಲಾಕ್‍ಡೌನ್ ಏರ್ಪಡಿಸುವ ಮೂಲಕ ವೈರಸ್ ವ್ಯಾಪಿಸುವುದನ್ನು ನಿಯಂತ್ರಣಕ್ಕೆ ತರಲಾಗಿದೆ. ಟ್ರಿಪಲ್ ಲಾಕ್ ವ್ಯವಸ್ಥೆ ಮೂಲಕ ಯಾರೊಬ್ಬರನ್ನೂ ಮನೆಯಿಂದ ಹೊರಗಿಳಿಯಲು ಬಿಡದೆ, ಎಲ್ಲ ಸಾಮಗ್ರಿ ಅವರ ಮನೆಗಳಿಗೆ ಪೂರೈಸುವ ಹೊಣೆಯನ್ನು ಜಿಲ್ಲಾಡಳಿತ ವಹಿಸಿಕೊಂಡಿತ್ತು. ರಾಜ್ಯದಲ್ಲಿ 373ಮಂದಿಗೆ ವೈರಸ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರೆ, ಹಲವಾರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಭಾನುವಾರದ ಲೆಕ್ಕಾಚಾರದನ್ವಯ 138ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 140ರ ಗಡಿ ದಾಟಿದ್ದ ಕಾಸರಗೋಡು ಜಿಲ್ಲೆಯ ಸೋಂಕಿತರ ಸಂಖ್ಯೆ ಭಾನುವಾರದ ವೇಳೆಗೆ ನೂರರ ಕೆಳಗೆ ಬಂದಿದೆ. ಇನ್ನು ಮನೆ ಹಾಗೂ ಆಸ್ಪತ್ರೆಗಳಲ್ಲಿ ನಿಗಾದಲ್ಲಿರುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪ್ರತ್ಯೇಕ ಕ್ರಿಯಾ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾಪೆÇಲಿಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಆರೋಗ್ಯ ಇಲಾಖೆ ಜಿಲ್ಲೆಯ ಮುಖ್ಯಸ್ಥರಾದ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರ ಪ್ರಬಂಧಕ ಡಾ.ರಾಮನ್ ಸ್ವಾತಿವಾಮನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕ್ರಿಯಾ ಯೋಜನೆ ಇದಾಗಿದೆ. ಅಪರ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯ ಆಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ರೆಜಿ ಕುಮಾರ್, ಜಿಲ್ಲಾ ಸಪ್ಲೈ ಆಫೀಸರ್ ವಿ.ಕೆ.ಶಶೀಂದ್ರನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕೇಶವನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಮೊದಲಾದವರು ಪ್ರಭಾರ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವುದೂ ಕೋವಿಡ್-19 ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
           ಅಭಿಮತ:
      ಮುಖ್ಯವಾಗಿ ವಿದೇಶದಿಂದ ಆಗಮಿಸಿದವರಲ್ಲಿ ಕೋವಿಡ್-19 ಕಾಣಿಸಿಕೊಂಡಿದ್ದು,  ಉಳಿದವರಿಗೆ ಸಂಪರ್ಕದಿಂದ ವೈರಸ್ ವ್ಯಾಪಿಸಿದೆ.  ರೋಗಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಲಕ್ಷಣಗಳಿಲ್ಲದ ಶಂಕಿತರು ಮೊದಲ ವಿಭಾಗದಲ್ಲಿ ಬರುತ್ತಿದ್ದು,  ಜ್ವರ, ಕೆಮ್ಮು, ಶೀತ ಲಕ್ಷಣಗಳನ್ನು ಹೊಂದಿರುವವರನ್ನು ಎರಡನೇ ವಿಭಾಗದಲ್ಲಿ ಗುರುತಿಸಲಾಗುತ್ತದೆ. ಶ್ವಾಸಕೋಶ, ನ್ಯುಮೋನಿಯಾ, ಕಿಡ್ನಿ ವೈಫಲ್ಯ ಸಹಿತ ಮಾರಕ ಕಾಯಿಲೆಯೊಂದಿಗೆ ಸೋಂಕು ಪೀಡಿತರನ್ನು ಮೂರನೇ ವಿಭಾಗದಲ್ಲಿ ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಸರಗೋಡಿನಲ್ಲಿ ಮೊದಲ ಹಾಗೂ ಎರಡನೇ ವಿಭಾಗದ ಸೋಂಕುಪೀಡಿತರು ಮಾತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ಸಾವಿನ ಅಂಚಿಗೆ ಸಾಗಿಲ್ಲ.
                           ಡಾ. ಜನಾರ್ದನ ನಾಯ್ಕ್, ಕನ್ಸಲ್ಟೆಂಟ್ ಫಿಸಿಶಿಯನ್
                               ಜನರಲ್ ಆಸ್ಪತ್ರೆ ಕಾಸರಗೋಡು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries