ನವದೆಹಲಿ: ಈ ಹಿಂದೆ ಎಲ್ಲರಿಗೂ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ ಪರೀಕ್ಷಾ ಸೌಲಭ್ಯ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಸೋಮವಾರ ತನ್ನ ಆದೇಶವನ್ನು ಮಾರ್ಪಡಿಸಿದ್ದು, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಬರುವ ಆರ್ಥಿಕವಾಗಿ ಹಿಂದೂಳಿದ ಬಡವರಿಗೆ ಮಾತ್ರ ಖಾಸಗಿ ಲ್ಯಾಬ್ ನಲ್ಲಿ ಉಚಿತ ಪರೀಕ್ಷೆ ಎಂದು ಹೇಳಿದೆ.
ಎಲ್ಲರಿಗೂ ಕೊವಿಡ್-19 ಉಚಿತ ಪರೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಳಿಸಿವಂತೆ ಕೋರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಖಾಸಗಿ ಲ್ಯಾಬ್ ನಲ್ಲಿ ಬಡವರಿಗೆ ಮಾತ್ರ ಉಚಿತ ಎಂದು ಹೇಳಿದೆ. ಅಲ್ಲದೆ ಇತರೆ ಆರ್ಥಿಕವಾಗಿ ಹಿಂದೂಳಿದ ಬಡವರ ಬಗ್ಗೆ ಒಂದು ವಾರದಲ್ಲಿ ಕೋರ್ಟ್ ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಕಳೆದ ವಾರ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಎಲ್ಲಾ ನಾಗರಿಕರಿಗೆ ಉಚಿತ ಕೊವಿಡ್-19 ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಉಚಿತ ಪರೀಕ್ಷೆ ನಡೆಸುವಂತೆ ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಥವಾ ಐಸಿಎಂಆರ್ ನಿಂದ ಅನುಮತಿ ಪಡೆದ ಪ್ರಯೋಗಾಲಯಗಳಲ್ಲಿ ಮಾತ್ರ ಕೊವಿಡ್ -19 ಪರೀಕ್ಷೆಗೆ ಅವಕಾಶ ನೀಡಬೇಕು ಮತ್ತು ಅದು ಉಚಿತವಾಗಿ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಪ್ರಸ್ತುತ ಖಾಸಗಿ ಪ್ರಯೋಗಾಲಯಗಳಲ್ಲಿ ಕೊವಿಡ್-19 ಪರೀಕ್ಷೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದಕ್ಕಾಗಿ 4500 ರೂ. ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದು ದುಬಾರಿಯಾಗುತ್ತಿದ್ದು, ಉಚಿತವಾಗಿಯೇ ಪರೀಕ್ಷೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.


