ಕಾಸರಗೋಡು: ಕೋವಿಡ್-19 ವೈರಸ್ ಬಾಧಿಸಿ ಕೋಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ದಂಪತಿ ವೈರಸ್ ವಾಸಿಯಾಗಿ ಮನೆಗೆ ತೆರಳಿದ್ದಾರೆ. ಪತ್ತನಂತಿಟ್ಟ ರಾನ್ನಿ ನಿವಾಸಿಥಾಮಸ್(93)ಹಾಗೂ ಇವರ ಪತ್ನಿ ಮರಿಯಮ್ಮ(88) ವೈರಸ್‍ನಿಂದ ಗುಣಮುಖರಾಗಿ ಮನೆಗೆ ತೆರಳಿದವರು. ಮುಂದಿನ 14ದಿವಸಗಳ ಕಾಲ ಇವರು ಮತ್ತೆ ಮನೆಯಲ್ಲಿ ಆರೋಗ್ಯ ಇಲಾಖೆಯ ನಿಗಾದಲ್ಲಿರಲಿದ್ದಾರೆ. ವಿಶ್ವದಲ್ಲೇ ಮಾರಕವೆನಿಸಿರುವ ಕಾಯಿಲೆ ವಾಸಿಮಾಡಿಕೊಟ್ಟ ವೈದ್ಯರಿಗೆ, ದಾದಿಯರಿಗೆ ಹಾಗೂ ನೆರವಾದ ಎಲ್ಲರಿಗೂ ತಮ್ಮ ಅಭಿನಂದನೆ ಸಲ್ಲಿಸಲು ಥಾಮಸ್ ದಂಪತಿ ಮರೆಯಲಿಲ್ಲ.
ವೈರಸ್ ಬಾಧಿಸಿದ ನಂತರ ಗುಣಮುಖರಾಗಿ ಮನೆಗೆ ತೆರಳುತ್ತಿರುವವರಲ್ಲಿ ದೇಶದಲ್ಲಿ ಅತ್ಯಂತ ಹಿರಿಯ ನಾಗರಿಕರು ಇವರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಎರಡು ದಿವಸಗಳ ಹಿಂದೆಯೇ ಇವರಿಗೆ ಸೋಂಕು ಸಂಪೂರ್ಣ ವಾಸಿಯಾಗಿದ್ದು, ನಂತರದ ಎರಡು ದಿವಸಗಳ ಕಾಲ ಇವರನ್ನು ನಿಗಾದಲ್ಲಿರಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮೆಡಿಕಲ್ ಬೋರ್ಡ್ ಸಭೆ ಸೇರಿ, ಇವರನ್ನು ಮನೆಗೆ ಕಳುಹಿಸಿಕೊಡಲು ತೀರ್ಮಾನಿಸಿತ್ತು. ಕೋವಿಡ್ ಸೋಂಕು ಹೊರತುಪಡಿಸಿ ಇವರಿಗೆ ಇನ್ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದೂ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕೋಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಒಟ್ಟು ಐದು ಮಂದಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದು, ಉಳಿದ ಮೂವರು ಈ ಹಿಂದೆಯೇ ಕಾಯಿಲೆ ವಾಸಿಯಾಗಿ ಮನೆ ಸೇರಿದ್ದಾರೆ.
ಕರೊನಾ ಬಾಧಿಸಿದವರಲ್ಲಿ 60ವರ್ಷ ಮೇಲ್ಪಟ್ಟವರನ್ನು ಹೈ ರಿಸ್ಕ್ ವಿಭಾಗದಲ್ಲಿ ಪರಿಗಣಿಸಲಾಗುತ್ತಿದ್ದು, ಈ ವಯಸ್ಸಿನವರಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಥಾಮಸ್-ಮರಿಯಮ್ಮ ದಂಪತಿ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚು ಆತಂಕಕ್ಕೊಳಗಾಗಿದ್ದರು.


