ಕಾಸರಗೋಡು: ಅನಿವಾರ್ಯ ಸಾಮಾಗ್ರಿಗಳನ್ನು ಹೇರಿಕೊಂಡು ಜಿಲ್ಲೆಗೆ ಆಗಮಿಸುವ ಲಾರಿಗಳ ಸಣ್ಣಪುಟ್ಟ ದುರಸ್ತಿಗಾಗಿ ಕುಟುಂಬಶ್ರೀ ನೇತೃತ್ವದಲ್ಲಿ 4 ಮೊಬೈಲ್ ವರ್ಕ್ ಶಾಪ್ ಇಂದು(ಏ.4) ಆರಂಭಗೊಳ್ಳಲಿದೆ. 2 ವರ್ಕ್ ಶಾಪ್ ಗಳು ಮಂಜೇಶ್ವರ ವಲಯದಲ್ಲೂ, 2 ವರ್ಕ್ ಶಾಪ್ಗಳು ಕಾಞಂಗಾಡ್ ವಲಯದಲ್ಲೂ ಚಟುವಟಿಕೆ ನಡೆಸಲಿವೆ. ಪಂಚರ್, ಟಯರ್ ಗೆ ಗಾಳಿ ತುಂಬುವುದು ಸಹಿತ ಸಣ್ಣಪುಟ್ಟ ದುರಸ್ತಿಗಳು ಈ ಮೂಲಕ ನಡೆಸಲಾಗುವುದು.
ಇಂದಿನಿಂದ ಲಾರಿ ಚಾಲಕರಿಗೆ ಮಿತ ಬೆಲೆಯಲ್ಲಿ ಆಹಾರ ಪೂರೈಕೆ:
ಅನಿವಾರ್ಯ ಸಾಮಾಗ್ರಿಗಳನ್ನು ಹೇರಿಕೊಂಡು ಜಿಲ್ಲೆಗೆ ಆಗಮಿಸುವ ಲಾರಿಗಳ ಚಾಲಕರಿಗೆ ಮಿತ ಬೆಲೆಯಲ್ಲಿ ಆಹಾರ ಒದಗಿಸುವ ಯೋಜನೆ ಇಂದು(ಏ.4) ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಬೆಳಗ್ಗಿನ ಉಪಹಾರಕ್ಕೆ ಇಡ್ಲಿ-ಸಾಂಬಾರ್, ಮಧ್ಯಾಹ್ನ ಚಿಕ್ಕನ್ ಬಿರಿಯಾನಾ, ಮೀನು ಕರಿ ಸಹಿತ ಭೋಜನ, ರಾತ್ರಿ ಚಪಾತಿ ವೆಜ್ಕರಿ ಯಾ ಮಟನ್ ಕರಿ ಕುಟುಂಬಶ್ರೀ ಮೂಲಕ ಒದಗಿಸಲಾಗುವುದು. ಇದಕ್ಕಾಗಿ ತಲಾ ಒಂದು ವಾಹನ ತಲಪ್ಪಾಡಿಯಲ್ಲೂ, ಕಾಲಿಕಡವಿನಲ್ಲೂ ಇರುವುದು.
ಗಡಿ ಪ್ರದೇಶಗಳಲ್ಲಿ ಕನ್ಸ್ಯೂ ಮರ್ ಸ್ಟೋರ್ ಗಳ ಆರಂಭ:
ಕಾಸರಗೋಡು ಜಿಲ್ಲೆಯಲ್ಲಿ ಗಡಿ ಪ್ರದೇಶಗಳ ಬಳಿ ಸಹಕಾರಿ ಸಂಘಗಳ ನೇತೃತ್ವದಲ್ಲಿ ಕನ್ಸ್ಯೂ ಮರ್ ಸ್ಟೋರ್ ಗಳನ್ನು ಆರಂಭಿಸಲಾಗುವುದು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಈ ಕ್ರಮ ಜಾರಿಗಳ್ಳಲಿದೆ. ದಿನಸಿ ಅಂಗಡಿ ಮತ್ತು ಔಷಧದ ಅಂಗಡಿ ಈ ನಿಟ್ಟಿನಲ್ಲಿ ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ಅನಿವಾರ್ಯ ಸಾಮಾಗ್ರಿಗಳು ಇಲ್ಲಿ ದೊರೆಯಲಿವೆ. ಗಡಿ ದಾಟದೇ ಜನತೆಗೆ ಸಾಮಾಗ್ರಿ, ಔಷಧ ಈ ಮೂಲಕ ಲಭಿಸಲಿದೆ.
ಒಟ್ಟು 10 ಸ್ಥಳಗಳಲ್ಲಿ ಈ ಸಹಕಾರಿ ಅಂಗಡಿಗಳು ಆರಂಭಗೊಳ್ಳಲಿವೆ. ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿಯ ತೂಮಿನಾಡು ರಸ್ತೆಯಲ್ಲಿ ಕುಂಜತ್ತೂರು-ಮಂಜೇಶ್ವರ ಸಹಕಾರಿ ಬ್ಯಾಂಕ್, ಅಡ್ಕ ಸ್ಥಳ ರಸ್ತೆಯಲ್ಲಿ ಅಡ್ಕ ಸ್ಥಳ-ಪೆರ್ಲ ಬ್ಯಾಂಕ್, ಸ್ವರ್ಗ ಆರ್ಲಡ್ಕ ರಸ್ತೆಯಲ್ಲಿ ಪೈವಳಿಕೆ (ಹೋಂಡೆಲಿವರಿ)-ಪೈವಳಿಕೆ ಬ್ಯಾಂಕ್, ಬೆರಿಪದವು ರಸ್ತೆಯಲ್ಲಿ ಬೆರಿಪದವು-ಬಾಯಾರು ಸಹಕಾರಿ ಬ್ಯಾಂಕ್, ಆದೂರು ಕೊಟ್ಯಾಡಿ, ಪಳ್ಳತ್ತೂರುಮ ಈಶ್ವರ ಮಂಗಳ ರಸ್ತೆಯಲ್ಲಿ ಪಿಡಿಯತ್ತಡ್ಕ-ಕಾಡಗಂ ಎಸ್.ಸಿ.ಬಿ., ನಾಟೆಕಲ್ಲು ಸುರ್ಲಯ ಪದವು ರಸ್ತೆಯಲ್ಲಿ ಕಾಡಗಂ ಅಗ್ರಿ ಕಲ್ಚರಿಸ್ಟ್ ಸಹಕಾರಿ ಸಂಘ, ಮಾಣಿಮೂಲೆ ಉಳ್ಯ ರಸ್ತೆಯಲ್ಲಿ ಕುತ್ತಿಕೋಲ್ ಅಗ್ರಿ ಸಹಕಾರಿ ಸಂಘ, ಆದೂರು-ಕೊಟ್ಯಾಡಿ-ಸುಳ್ಯ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಸಂಘ. ಗಾಳಿಮುಖ, ಈಶ್ವರಮಂಗಲ ದೇಲಂಪಾಡಿ ರಸ್ತೆಯಲ್ಲಿ ದೇಲಂಪಾಡಿ ಅಗ್ರಿ ಸಹಕಾರಿ ಬ್ಯಾಂಕ್ ಗಳಲ್ಲಿ ಈ ಕೇಂದ್ರಗಳು ಆರಂಭಗೊಳ್ಳಲಿವೆ.
ಸಾಮಾಗ್ರಿಗಳ ರವಾನೆಗೆ 2 ಲಾರಿಗಳನ್ನು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದ್ದಾರೆ. ಇಂದು(ಏ.4) ಬೆಳಗ್ಗೆ 11 ಗಂಟೆಗೆ ಮಾರಾಟ ಆರಂಭಗೊಳ್ಳಲಿದೆ ಎಂದು ಸಹಕಾರಿ ಜಾಯಿಂಟ್ ರೆಜಿಸ್ತ್ರಾರ್ ತಿಳಿಸಿದರು. ಅಕ್ಕಿ,ಬೇಳೆ, ಸಕ್ಕರೆ ಸಹಿತ ಸಾಮಾಗ್ರಿಗಳು ಇಲ್ಲಿ ಲಭಿಸಲಿವೆ. ಗಡಿಭಾಗಗಳಲ್ಲಿ ಪುಟ್ಟ ಪೇಟೆಗಳನ್ನು ನಿರ್ಮಿಸುವುದು ಇಲ್ಲಿನ ಉದ್ದೇಶ. ಈ ನಿಟ್ಟಿನಲ್ಲಿ ವ್ಯಾಪಾರಿ ವ್ಯವಸಾಯಿ ಸಂಘಟನೆಗಳ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸುವರು.

