ನವದೆಹಲಿ: ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕಾಸರಗೋಡಿನ ಜನರ ವೈದ್ಯಕೀಯ ಚಿಕಿತ್ಸೆಗೆ ಅನುಕೂಲಕರ ನಿರ್ಧಾರ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಶುಕ್ರವಾರ ಸೂಚನೆ ನೀಡಿದೆ.
ಕಾಸರಗೋಡು ಮಂಗಳೂರು ರಸ್ತೆಯ ಮುಚ್ಚುವಿಕೆಯನ್ನು ತೆರವುಗೊಳಿಸಿ ಕೊರೊನಾ ವೈರಸ್ ಸೋಂಕು ಪೀಡಿತರಿಗೆ ನೆರವಾಗಬೇಕೆಂದು ಗುರುವಾರ ಕೇರಳ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಈ ಸೂಚನೆ ನೀಡಿದೆ.
ಆರೋಗ್ಯದ ವಿಚಾರವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ಲಭ್ಯವಾಗಿಸುವಂತೆ ವ್ಯವಸ್ಥೆಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಬೇಕು ಎಂದು ಸೂಚಿಸಿ ಏ.7 ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಲಾಕ್ ಡೌನ್ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಮಂಗಳೂರು ಹಾಗೂ ಕಾಸರಗೋಡು ರಸ್ತೆಯನ್ನು ಬಂದ್ ಮಾಡಿತ್ತು. ಕಾಸರಗೋಡಲ್ಲಿ ಕೊರೊನಾ ಪೀಡಿತರ ಸಂಖ್ಯೆ ಅಧಿಕವಿರುವುದರಿಂದ ಮಂಗಳೂರಲ್ಲಿ ಚಿಕಿತ್ಸೆಗೆ ಮುಂದಾಗಿದ್ದರು. ರಸ್ತೆ ಬಂದ್ ಆದ ಹಿನ್ನೆಲೆಯಲ್ಲಿ ರೋಗಿಗಳಿಗೆ ಮಂಗಳೂರು ಸಂಪರ್ಕ ಕಡಿಯಲ್ಪಟ್ಟಿತು. ರಸ್ತೆ ನಿಷೇಧಿಸಲ್ಪಟ್ಟ ಹಿನ್ನೆಲೆಯಲ್ಲಿ ಓರ್ವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆಂದು ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ರಸ್ತೆ ತೆರವಿಗೆ ಕರ್ನಾಟಕ ಸರ್ಕಾರಕ್ಕೆ ಸೂಚಿಸುವಂತೆ ಕೋರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೇರಳ ಉಚ್ಚ ನ್ಯಾಯಾಲಯ ಕಾಸರಗೋಡು-ಮಂಗಳೂರು ರಾ.ಹೆದ್ದಾರಿ ತೆರೆಯುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಕೇರಳ ಹೈಕೋರ್ಟ್ ಸೂಚನೆ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು.


