ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಧಾನಿ ನರೇಂದ್ರಮೋದಿಯವರು ಗುರುವಾರ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಪರೆನ್ಸ್ ನಲ್ಲಿ ಕೇರಳ ಸಹಿತ ವಿವಿಧ ರಾಜ್ಯಗಳ ಸಮರೋಪಾದಿಯ ವೈರಸ್ ತಡೆ ಉಪಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಈ ಪೈಕಿ ಕೇರಳದ ಕೋವಿಡ್ ನಿರ್ಬಂಧ ಚಟುವಟಿಕೆಗಳು ಗಮನಾರ್ಹವಾಗಿದ್ದು ಇತರ ರಾಜ್ಯಗಳ ಗಮನ ಸೆಳೆಯುವಲ್ಲೂ ಸಫಲವಾಗಿದೆ.
ಜೊತೆಗೆ ದಿನನಿತ್ಯ ಸಂಜೆ ವಿಶೇಷ ಸುದ್ದಿಗೋಷ್ಠಿ ನಡೆಸಿ ರಾಜ್ಯದ ದಿನದ ಸಂಪೂರ್ಣ ಮಾಹಿತಿ ನೀಡುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಶ್ಚಿತ ಕಾರ್ಯಸೂಚಿಯೂ ಪ್ರಧಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಗುರುವಾರ ಸಂಜೆ ಮುಖ್ಯಮಂತ್ರಿಗಳು ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 1,65,934 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1,65,291 ಮಂದಿ ಮನೆಗಳಲ್ಲೂ, 643 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 8456 ಸ್ಯಾಂಪಲ್‍ಗಳನ್ನು ಪರಿಶೋಧನೆಗೆ ಕಳುಹಿಸಲಾಗಿದ್ದು, ಈ ಪೈಕಿ 7622 ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ವರೆಗೆ ಕೊರೊನಾ ವೈರಸ್ ಸೋಂಕು ಬಾಧಿಸಿದವರಲ್ಲಿ 200 ಮಂದಿ ವಿದೇಶದಿಂದ ಬಂದವರು. ರೋಗಿಗಳೊಂದಿಗಿನ ಸಂಪರ್ಕದಿಂದ 76 ಮಂದಿಗೆ ಮತ್ತು 7 ಮಂದಿ ವಿದೇಶಿಯರಾಗಿದ್ದಾರೆ. ನಿಜಾಮುದ್ದಿನ್ ಸಮಾವೇಶದಲ್ಲಿ ಭಾಗವಹಿಸಿ ವಾಪಸಾದ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಒಬ್ಬ ಗುಜರಾತ್‍ನಿಂದ ಬಂದ ವ್ಯಕ್ತಿಗೆ ರೋಗ ಬಾಧಿಸಿದೆ. ಗುರುವಾರ ತಿರುವನಂತಪುರ ಮತ್ತು ಮಲಪ್ಪುರ ಜಿಲ್ಲೆಯ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 10240 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 10063 ಮಂದಿ ಮನೆಗಳಲ್ಲೂ, 177 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಈ ತನಕ 1214 ಸ್ಯಾಂಪಲ್‍ಗಳನ್ನು ಲ್ಯಾಬ್‍ಗಳಿಗೆ ಕಳುಹಿಸಲಾಗಿದೆ. ಗುರುವಾರ 37 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. 362 ಸ್ಯಾಂಪಲ್‍ಗಳ ಫಲಿತಾಂಶ ಇನ್ನಷ್ಟೇ ಲಭಿಸಬೇಕಾಗಿದೆ. ಹೊಸದಾಗಿ 21 ಮಂದಿಯನ್ನು ಐಸೋಲೇಶನ್ ವಾರ್ಡ್‍ಗೆ ದಾಖಲಿಸಲಾಗಿದೆ.
ಭೀತಿ ಪಡಬೇಕಾದ ಕಾರಣಗಳು:
ದೇಶ ವ್ಯಾಪಕವಾಗಿ ಕೊರೊನಾ ಸೋಂಕು ಗಂಭೀರ ಸ್ವರೂಪದಲ್ಲಿ ಹರಡುತ್ತಿರುವಂತೆ ಇತರೆಡೆಗಳಿಗಿಂತ ಕೇರಳ ಹೆಚ್ಚು ಕಳವಳಗೊಂಡಿತ್ತು. ಕಾರಣ ರಾಜ್ಯದ ಶೇ.40 ರಷ್ಟು ಮಂದಿ ಜಗದಗಲ ವಿವಿಧ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರು. ರಾಜ್ಯದ ಆದಾಯ ಮೂಲವಾಗಿರುವ ಅಬಕಾರಿ, ಲಾಟರಿಗಳಂತೆ ವಿದೇಶದಲ್ಲಿ ದುಡಿಯುವವರೂ(ಪ್ರವಾಸಿ ಮಲೆಯಾಳಿ) ಪ್ರಮುಖ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಲ್ಪ್ ರಾಷ್ಟ್ರಗಳಲ್ಲಿ ಕೋವಿಡ್ ಕಾರಣ ಊರಿಗೆ ಮರಳಿದ ಮಲೆಯಾಳಿಗರಿಂದ ವ್ಯಾಪಕ ಪ್ರಮಾಣದ ಸೋಂಕು ಹಬ್ಬುವ ಸಾಧ್ಯತೆಗಳ ಬಗ್ಗೆ ಸಂಶಯಿಸಲಾಗಿತ್ತು.
ಆದರೆ.....ವಿಸ್ಕøತ ಯೋಜನೆ ಗೆಲ್ಲಿಸಿತು!
ರಾಜ್ಯ ಸರ್ಕಾರ ಇಂತಹ ಗಂಭೀರತೆಯನ್ನು ಗಮನಿಸಿ ಆರಂಭದ ದಿನದಿಂದಲೇ ಸಮರೋಪಾದಿಯ ಕ್ರಮಗಳನ್ನು ಕೈಗೊಂಡಿತು. ವಿದೇಶದಿಂದ ಆಗಮಿಸಿದವರನ್ನು ಕಡ್ಡಾಯ ಕ್ವಾರಂಟೈನ್ ಗೊಳಪಡಿಸಿತು. 14 ದಿನಗಳ ಕಡ್ಡಾಯ ಕ್ವಾರಂಟೈನ್ ಬಹುತೇಕ ಯಶಸ್ವಿಯಾಗಿದೆ.
ಜಿಲ್ಲಾಡಳಿತಕ್ಕೆ ಪೂರ್ಣಾಧಿಕಾರ:
ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಪೂರ್ಣಾಧಿಕಾರ ನೀಡಿ ಮಾರ್ಗನಿರ್ದೇಶನಗಳನ್ನೂ ಹೊರಡಿಸಿತು. ಇದರಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಿ ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ ಗ್ರಾ.ಪಂ. ಮಟ್ಟದಲ್ಲಿ ಅಧಿಕೃತರ ಸಮಿತಿ ರಚಿಸಿ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣ ಕೈಗೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರದಲ್ಲೇ ಕಾಸರಗೋಡು ಜಿಲ್ಲೆ ಅತೀ ಹೆಚ್ಚು ಕೊರೊನಾ ರೋಗಿಗಳಿರುವ ಏಕೈಕ ಜಿಲ್ಲೆ ಎಂಬ ಗಂಭೀರತೆಯ ಹಿನ್ನೆಲೆಯಲ್ಲಿ ಕಾಸರಗೋಡಿನ ನಿಯಂತ್ರಣಗಳನ್ನು ಹೆಚ್ಚು ಬಲಗೊಳಿಸಲಾಗಿದೆ.
ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿಯಂತ್ರಿಸಿ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯ ಮಧ್ಯೆ ಮಾತ್ರ ದಿನಸಿ, ತರಕಾರಿ, ಮೆಡಿಕಲ್ ಸ್ಟೋರ್, ಬ್ಯಾಂಕ್ ಕಚೇರಿಗಳ ಕಾರ್ಯ ಚಟುವಟಿಕೆಗಳನ್ನು ಪುನಃ ಸಂಘಟಿಸಲಾಗಿದೆ. ಬೆಳಿಗ್ಗೆ 11 ರ ಮೊದಲು ಮತ್ತು ಸಂಜೆ ಐದರ ಬಳಿಕ ಮನೆಬಿಟ್ಟು ಹೊರಬಾರದಂತೆ ಜನರನ್ನು ಕಟ್ಟುನಿಟ್ಟುಗೊಳಿಸಲಾಗಿದೆ.
11 ರಿಂದ ಸಂಜೆ 5 ರ ಮಧ್ಯೆ ಪೇಟೆ-ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಗುಂಪುಗೂಡದೆ ನಿರ್ದಿಷ್ಟ ಅಂತರ ಕಾಯ್ದು ಸರತಿಯಲ್ಲಿ ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ.
ಇಂತಹ ಕಟಿಣ ಕ್ರಮಗಳಿಗೆ ಪೋಲೀಸರನ್ನು ನಿಯೋಜಿಸಲಾಗಿದ್ದು ಕಾನೂನು ಮೀರುವವರನ್ನು ದಂಡಿಸುವ, ದೂರು ದಾಖಲಿಸುವ ಅಧಿಕಾರವನ್ನು ಪೋಲೀಸರಿಗೆ ನೀಡಿರುವುದರಿಂದ ನಿರ್ಬಂಧಗಳು ಯಶಸ್ವಿಯಾಗಲು ಕಾರಣವಾಗಿದೆ.
ಮನೋಸ್ಥೈರ್ಯ ಕಾಪಿಡುವ ಉಪಕ್ರಮ:
ಸುಧೀರ್ಘ ಅವಧಿ ಮನೆಗಳಲ್ಲೇ ಉಳಿದುಕೊಳ್ಳುವ ಜನರಿಗೆ, ರೋಗಬಾಧೆಯ ಸಂಶಯಗಳಿಂದ ಮನೆಗಳಲ್ಲಿ ನಿರೀಕ್ಷೆಯಲ್ಲಿರುವವರ ಮಾನಸಿಕ ಸ್ಥೈರ್ಯ ಕಾಪಿಡುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ವಿಭಾಗವನ್ನು ಸುದೃಢಗೊಳಿಸಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಕೌನ್ಸಿಲಿಂಗ್ ಲಭ್ಯವಿದೆ. ಅಲ್ಲದೆ ಉಚಿತ ಟೋಲ್ ಪ್ರೀ ಸಂಖ್ಯೆಯನ್ನು ಒದಗಿಸುವ ಮೂಲಕ, ಪೋನ್ ಮೂಲಕ, ಆನ್‍ಲೈನ್ ಮೂಲಕ, ವಿವಿಧ ಸಮೂಹ ಮಾಧ್ಯಮಗಳ ಮೂಲಕ ಭೀತಿಯನ್ನು ತಣಿಸಲು ಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ ಹೋಮಿಯೋಪತಿ, ಆಯುರ್ವೇಧ ಪದ್ದತಿಗಳ ನೆರವನ್ನೂ ಒದಗಿಸಲಾಗುತ್ತಿದೆ.
ಸಮುದಾಯ ಅಡುಗೆ!:
ಅನ್ಯ ರಾಜ್ಯ ಕಾರ್ಮಿಕರು, ನಿರ್ಗತಿಕ ಕುಟುಂಬ, ವಿಧವೆಯರು, ಗರ್ಭಿಣಿಯರು ವಯೋವೃದ್ದರಿಗೆ ನೆರವು ನೀಡುವ ನಿಟ್ಟಿನಲ್ಲಿ ಸ್ಥಳೀಯ ಗ್ರಾ.ಪಂ.ಗಳ ಸಹಕಾರದಲ್ಲಿ ಕುಟುಂಬಶ್ರೀ ಸಹಿತ ಆರೋಗ್ಯ ಇಲಾಖೆ ಮತ್ತು ವಿವಿಧ ಸ್ವಯಂ ಸೇವಕ ಸಂಘಗಳ ಸಹಯೋಗದಲ್ಲಿ ಸಮುದಾಯ ಅಡುಗೆ ಯೋಜನೆಯಂತೆ ಆಹಾರ ವಸ್ತುಗಳು, ದಿನ ಬಳಕೆಯ ಸಾಮಗ್ರಿಗಳನ್ನು ಗುರುತಿಸಲ್ಪಟ್ಟ ಜನರ ಮನೆಮನೆಗೆ ತಲಪಿಸಲಾಗುತ್ತಿದೆ.
ಗಡಿ ತಂಟೆ: ಮಂಗಳೂರು ಸಂತೆ!!
ಗಡಿನಾಡು ಕಾಸರಗೋಡಿಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯು ಕಾಸರಗೋಡಿನಲ್ಲಿ ವ್ಯಾಪಕಗೊಂಡಿರುವ ಕೊರೊನಾ ರೋಗ ಬಾಧಿತರ ಸಂಖ್ಯೆಯ ಏರುಗತಿಯ ಕಾರಣ ಗಡಿಗಳನ್ನು ಸಂಪೂರ್ಣ ಬಂದ್ ಮಾಡಿದೆ. ಈ ಕಾರಣದಿಂದ ಚಿಕಿತ್ಸೆ ಸಹಿತ ಎಲ್ಲಾ ಅಗತ್ಯಗಳಿಗೂ ಮಂಗಳೂರು ಸಹಿತ ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳನ್ನು ದಿನನಿತ್ಯ ಸಂಪರ್ಕಿಸುವ ಗಡಿನಾಡಿನ ಜನರು ಸಂಕಷ್ಟಕ್ಕೊಳಗಾದರು. ಒಂದು ಹಂತದಲ್ಲಿ ಇತರ ಆರೋಗ್ಯ ಸಂಬಂಧಿ ಅಸೌಖ್ಯದಿಂದ ಬಳಲುತ್ತಿದ್ದ ಇಲ್ಲಿಯ ಏಳು ಮಂದಿ ರೋಗಿಗಳು ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯಲಾರದೆ ಮೃತಪಟ್ಟ ಘಟನೆಯೂ ನಡೆದು ಕರ್ನಾಟಕ ಸರ್ಕಾರದ ಮೊಂಡು ವಾದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.
ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಕೊರೊನಾ ನಿಯಂತ್ರಣ ಕ್ರಮಕ್ಕೆ ಅಸಮರ್ಪಕ ಯೋಜನೆ ಜಾರಿಗೊಳಿಸುವ ಮೂಲಕ ನಗೆಪಾಟಲಿಗೀಡಾಗಿ ರೋಗ ಬಾಧಿತರ ಸಂಖ್ಯೆ ಏರುವುದಕ್ಕೂ ಕಾರಣವಾಗುತ್ತಿದೆ.


