ಕಾಸರಗೋಡು: ರೋಗಿಗಳ ಕೃತಕ ಉಸಿರಾಟ ವ್ಯವಸ್ಥೆಗಾಗಿ ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್ ವೆಂಟಿಲೇಟರ್ ಉಪಕರಣವೊಂದನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎ. ವಿ. ಪ್ರದೀಪ್ ಆವಿಷ್ಕರಿಸಿದ್ದಾರೆ.
ಕೃತಕ ಉಸಿರಾಟಕ್ಕಾಗಿ ಉಪಯೋಗಿಸುವ ಆಂಬು (ಆರ್ಟಿಫಿಶಿಯಲ್ ಮಾನ್ಯುವಲ್ ಬ್ರೀತಿಂಗ್ ಯೂನಿಟ್) ವಿಗೆ ಮೋಟಾರ್ ಒಂದನ್ನು ಅಳವಡಿಸಿ ಸ್ವಯಂಚಾಲಿತ ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಲಾಗಿದೆ. ಆಂಬುಲೆನ್ಸ್ ಅಥವಾ ಇನ್ನಿತರ ಅವಶ್ಯಕ ಕೇಂದ್ರಗಳಲ್ಲಿ ಉಪಯೋಗಿಸಲಾಗುವ ಆಂಬು ಘಟಕವನ್ನು ಕೈಯಿಂದ ಅದುಮುವ ಮೂಲಕ ಉಪಯೋಗಿಸಲಾಗುತ್ತಿತ್ತು. ಇದಕ್ಕೆ ಪ್ರದೀಪ್ ಅವರು ಮೋಟಾರ್ ಅಳವಡಿಸುವ ಮೂಲಕ ಸ್ವಯಂಚಾಲಿತವಾಗಿ ಇದು ಕಾರ್ಯಪ್ರವೃತ್ತರಾಗುವಂತೆ ಮಾಡಿದ್ದಾರೆ. ಇದು ಕೇವಲ ಮೂರು ಸಾವಿರ ರೂಪಾಯಿ ಖರ್ಚಿನಲ್ಲಿ ಮಾಡಲು ಸಾಧ್ಯ.
ಕೋವಿಡ್ ರೋಗಾಣು ಅನಿಯಂತ್ರಿತವಾಗಿ ಹೆಚ್ಚಾದರೆ ಇದನ್ನು ಉಪಯೋಗಿಸಬಹುದು. ಕೊರೊನ ರೋಗವು ಶ್ವಾಸಕೋಶಕ್ಕೆ ಹೆಚ್ಚಾಗಿ ಬಾಧಿಸುತ್ತದೆ. ಅಸ್ತಮಾ ರೋಗಿಗಳೂ ಇದನ್ನು ಉಪಯೋಗಿಸಬಹುದು. ಅಗತ್ಯ ಇದ್ದವರು ಸೂಚಿಸಿದರೆ ಲಾಕ್ ಡೌನ್ ಅವಧಿಯ ಬಳಿಕ ಈ ಸ್ವಯಂಚಾಲಿತ ವೆಂಟಿಲೇಟರ್ ನ್ನು ತಯಾರಿಸಿ ನೀಡಲು ಸಿದ್ಧ ಎಂದು ಡಾ. ಎ.ವಿ ಪ್ರದೀಪ್ ನುಡಿಯುತ್ತಾರೆ. ಬೆಂಗಳೂರು ಇಂಡಿಯನ್ ಇನ್ಟಿಟ್ಯೂಟ್ ಆಫ್ ಸಯನ್ಸ್ ಈ ಸಂಸ್ಥೆಯಲ್ಲಿ ಸಂಶೋಧಕನಾಗಿದ್ದ ಇವರು ಹಲವು ಉಪಕರಣಗಳನ್ನು ಈ ಮೊದಲು ತಯಾರಿಸಿದ್ದಾರೆ. ಮೂಲತಃ ಇವರು ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನವರು.


