ಮುಳ್ಳೇರಿಯ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಗಿರುವ ಗ್ರಾಮೀಣ ಗಡಿಗಳ ರಸ್ತೆಗಳನ್ನು ಮುಚ್ಚುಗಡೆ ಮಾಡಲಾಗಿದೆ. ಇದರಿಂದಾಗಿ ಕಾಸರಗೋಡಿನಿಂದ ಕಣ್ಣೂರಿಗೆ ತೆರಳಲು ಅನನುಕೂಲದ ಅತಂತ್ರತೆ ಎದುರಾಗಿದೆ.
ಕಣ್ಣೂರು ಜಿಲ್ಲೆಯ ಆಲಕೋಡು, ಪೆರಿಂಙõÉೂಂ, ಚಿಟ್ಟಾರಿಕ್ಕಲ್, ಕರಿವಂಜೂರು, ಕಾಂಗೋಲು, ಆಲಪಾಡು ಮೊದಲಾದ ರಸ್ತೆಗಳನ್ನು ಮುಚ್ಚಲಾಗಿದೆ.
ಇದರಿಂದಾಗಿ ಕಾಸರಗೋಡು ಜಿಲ್ಲೆಯ ಜನರಿಗೆ ಕಣ್ಣೂರು ಜಿಲ್ಲೆಗೆ ತೆರಳಲಾರದ ಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಕಣ್ಣೂರು ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳಲು ಇದರಿಂದ ವೈತ್ಯಯ ಉಂಟಾಗಲಿದೆ.
ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಕರ್ಯಗಳಿಲ್ಲದಿರುವುದರಿಂದ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದರು. ಇದೀಗ ರಸ್ತೆ ಮುಚ್ಚುಗಡೆಯಿಂದಾಗಿ ಕಾಸರಗೋಡಿನ ಜನರಿಗೆ ಕಣ್ಣೂರು ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಮಲೆನಾಡು ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಣ್ಣೂರು ಜಿಲ್ಲಾ ಎಸ್.ಪಿ. ಯತೀಶ್ಚಂದ್ರ ಅವರ ಆದೇಶದಂತೆ ಗಡಿ ಭಾಗದ ರಸ್ತೆಗಳನ್ನು ಮುಚ್ಚಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಕೊರೊನಾ ವೈರಸ್ ಸೋಂಕು ಬಾಧಿತರಿರುವುದರಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಆದರೆ ತುರ್ತು ಪ್ರಯಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಗಳಿಲ್ಲದೆ ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಒಳ ಗ್ರಾಮೀಣ ಪ್ರದೇಶಗಳ ಜನರು ಅತ್ತ ಮಂಗಳೂರಿಗೂ ತೆರಳಲಾಗದೆ, ಇತ್ತ ಕಣ್ಣೂರಿಗೂ ಹೋಗಲಾಗದೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

