ಕಾಸರಗೋಡು: ವಿದೇಶದಿಂದ ಆಗಮಿಸಿದ ಕಾಸರಗೋಡು ಎರಿಯಾಲ್‍ನಿವಾಸಿ ಆರೋಗ್ಯ ಇಲಾಖೆ ಮಾರ್ಗನಿರ್ದೇಶನ ಪಾಲಿಸದೆ ವ್ಯಾಪಕವಾಗಿ ವೈರಸ್ ಹರಡಲು ಕಾರಣನಾಗಿದ್ದು, ಈತನ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಶಾಸಕರಾದ ಎನ್.ಎ ನೆಲ್ಲಿಕುನ್ನು ಹಾಗೂ ಎಂ.ಸಿ ಕಮರುದ್ದೀನ್ ಹಾಗೂ ಮುಸ್ಲಿಂಲೀಗ್ ಮುಖಂಡರೊಂದಿಗೆ ಈತನಿಗಿರುವ ನಿಕಟ ಸಂಪರ್ಕದ ಬಗ್ಗೆಯೂ ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ನಿರ್ದೇಶಗಳನ್ನು ಗಾಳಿಗೆ ತೂರಿ ವ್ಯಾಪಕವಾಗಿ ಸುತ್ತಾಟ ನಡೆಸಿದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ವೈರಸ್ ಅತಿಶೀಘ್ರ ವ್ಯಾಪಿಸಲು ಕಾರಣವಾಗಿದೆ ಎಂದೂ ಸಮಿತಿ ತಿಳಿಸಿದೆ.
ವೈಫಲ್ಯ ಮರೆಮಾಚುವ ತಂತ್ರ:
ಕೇರಳವನ್ನು ಹಲವು ದಶಕಗಳಿಂದ ಅದಲು ಬದಲಾಗಿ ಆಡಳಿತ ನಡೆಸುತ್ತಿರುವ ಎಡರಂಗ ಹಾಗೂ ಐಕ್ಯರಂಗದ ವೈಫಲ್ಯ ಮರೆಮಾಚಲು ಗಡಿ ಮುಚ್ಚಿದ ಕರ್ನಾಟಕ ಸರ್ಕಾರದ ಧೋರಣೆಯನ್ನು ಟೀಕಿಸುತ್ತಿರುವುದು ಖಂಡನೀಯ. ಕಾಸರಗೋಡಿನಲ್ಲಿ ಅತಿಶೀಘ್ರವಾಗಿ ವೈರಸ್ ವ್ಯಾಪಿಸುತ್ತಿರುವುದನ್ನು ಮನಗಂಡು ದ.ಕ ಜಿಲ್ಲಾಡಳಿತ ತಲಪ್ಪಾಡಿಯಲ್ಲಿ ಗಡಿ ಮುಚ್ಚುಗಡೆಗೊಳಿಸುವ ಮೂಲಕ ತಮ್ಮ ಜನರ ಜೀವ ಉಳಿಸಲು ನೈಜ ಹೋರಾಟ ನಡೆಸುತ್ತಿರುವ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸುವ ಬದಲು ಕಾಸರಗೋಡಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಎರಡೂ ರಂಗಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಲ್ಲಿ ಇಂದಿನ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


