ದುಬೈ: ಮಾತೃ ದೇಶಕ್ಕೆ ತೆರಳಲು ಆಗ್ರಹಿಸುವ ಎಲ್ಲಾ ಜನರನ್ನೂ ಅವರವರ ಮಾತೃದೇಶಗಳು ಕಡ್ಡಾಯವಾಗಿ ಕರೆದೊಯ್ಯಬೇಕು. ಅಲ್ಲದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಲು ಸಿದ್ದರಾಗಿರಬೇಕು ಎಂದು ಯುಎಇ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸುವುದರೊಂದಿಗೆ ಕೋವಿಡ್ ಆತಂಕದ ಮತ್ತೊಂದು ಮಗ್ಗುಲ ತೆರೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಒಂದು ವೇಳೆ ವಿವಿಧ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳದಿದ್ದರೆ ಆಯಾ ದೇಶದೊಂದಿಗಿರುವ ಉದ್ಯೋಗ ಸಂಬಂಧಿ ಕಾನೂನುಗಳನ್ನು ರದ್ದುಗೊಳಿಸಲಾಗುವುದೆಂದು ಯುಎಇ ಎಚ್ಚರಿಸಿದೆ.
ಯಾವ ದೇಶಗಳು ತಮ್ಮೊಂದಿಗೆ ಸಹಕರಿಸದೆ ಪ್ರಜೆಗಳನ್ನು ಕರೆಸಿಕೊಳ್ಳುತ್ತಿಲ್ಲವೋ ಅಂತಹ ರಾಷ್ಟ್ರಗಳ ವೀಸ್ಹಾ ಕಾನೂನುಗಳನ್ನು ಬದಲಾಯಿಸಿ ಇನ್ನೆಂದಿಗೂ ಯುಎಯಿಗೆ ಬರಲಾಗದ ಕಠಿಣ ಕಾನೂನು ಕೈಗೊಳ್ಳಬೇಕಾಗುತ್ತದೆ ಎಮದಿರುವ ಯುಎಇ ಯಾವುದೇ ರಾಷ್ಟ್ರದ ಹೆಸರನ್ನು ಉಲ್ಲೇಖಿಸಿಲ್ಲ.
ಯುಎಇಯಲ್ಲಿರುವ ಬಹುತೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಈಗಾಗಲೇ ಕರೆದೊಯ್ದಿದೆ. ಆದರೆ ಭಾರತ ಸಹಿತ ಕೆಲವು ಏಷ್ಯಾ ರಾಷ್ಟ್ರಗಳು ಯುಎಇಯಿಂದ ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೀನಮೇಷ ಎಣಿಸುತ್ತಿದೆ. ಯುಎಇಯಲ್ಲಿ ಲಕ್ಷಾಂತರ ಮಂದಿ ಭಾರತೀಯರಿದ್ದು ಯುಎಇಯ ಇಂತಹ ನಿರ್ಣಯ ವ್ಯಾಪಕ ಪ್ರತಿಕೂಲತೆಗೆ ಕಾರಣವಾಗಲಿದೆ. ಅನೇಕ ವೈಮಾನಿಕ ಸಂಸ್ಥೆಗಳು ಭಾರತಕ್ಕೆ ಈ ಹಿಂದೆ ಹಲವು ಬಾರಿ ಶೆಡ್ಯೂಲ್ಡ್ ಸಂಚಾರಕ್ಕೆ ಉತ್ಸುಕವಾಗಿದ್ದವು. ಈ ನಿಟ್ಟಿನಲ್ಲಿ ಅವುಗಳು ಮುಂಗಡ ಟಿಕೆಟ್ ಬುಕ್ಕಿಂಗ್ ನ್ನೂ ಆರಂಭಿಸಿತ್ತು. ಆದರೆ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಯುಎಇಯಲ್ಲಿರುವ ಭಾರತೀಯರ ಮರಳುವಿಕೆ ತ್ರಿಶಂಕುವಿಗೊಳಪಟ್ಟಿತು.
ಊರಿಗೆ ತೆರಳಲು ಆಗ್ರಹಿಸುವ ಭಾರತೀಯರ ಸಹಿತ ಇತರ ರಾಷ್ಟ್ರದ ಕಾರ್ಮಿಕರಿಗೆ ಯುಎಇ ರಜೆಯನ್ನೂ ಈಗಾಗಲೇ ಘೋಶಿಸಿದ್ದು, ಪ್ರಯಾಣ ವ್ಯವಸ್ಥೆಗಳಿಲ್ಲದೆ ಲಕ್ಷಾಂತರ ಮಂದಿ ದಿಕ್ಕೆಟ್ಟಿದ್ದಾರೆ. ಯುಎಇಯ ಭಾರತೀಯ ದೂತಾವಾಸವು ಇದೀಗ ನಿರ್ಣಯಗಳನ್ನು ಕೈಗೊಳ್ಳಲು ಸನ್ನದ್ದವಾಗಿದ್ದು, ಭಾರತ ಸರ್ಕಾರ ಮೇ ಮಾಸದ ಮೊದಲ ವಾರ ಈ ನಿಟ್ಟಿನ ವಿಮಾನ ಹಾರಾಟ ನಡೆಯುವ ಬಗ್ಗೆ ಚಿಂತಿಸಿದೆ.
ಈ ಮಧ್ಯೆ ಯುಎಇಯಲ್ಲಿ ವ್ಯಾಪಕಗೊಳ್ಳುತ್ತಿರುವ ಕೋವಿಡ್ ಪರಿಣಾಮ ಅಲ್ಲಿಂದ ಆಗಮಿಸುವ ಭಾರತೀಯರ ಆಗಮನದಿಂದ ಮತ್ತಷ್ಟು ರೋಗ ಉಲ್ಬಣದ ಭಯ ಕಾಡುತ್ತಿದ್ದು, ಆಗಮಿಸಿದೊಡನೆ ಕೈಗೊಳ್ಳಬೇಕಾದ ತುರ್ತು ಕಾರ್ಯಕ್ರಮದ ಬಗ್ಗೆ ರೂಪುರೇಖೆ ತಯಾರಾಗುತ್ತಿದೆ ಎಂದು ತಿಳಿದುಬಂದಿದೆ.


