ಬದಿಯಡ್ಕ: ಬದಿಯಡ್ಕದ ಪಳ್ಳತ್ತಡ್ಕ ಸಮೀಪದ ಬೈಕುಂಜ ನಿವಾಸಿ ಕೃಷಿಕ ಶಂಕರನಾರಾಯಣ ಭಟ್ ಅವರು ಬೆಳೆಸಿದ್ದ 14 ಟನ್ ಗಳಷ್ಟು ಕುಂಬಳಕಾಯಿ ಲಾಕ್‍ಡೌನ್ ಕಾರಣ ಮಾರಾಟಗೈಯ್ಯಲಾಗದೆ ಕೊನೆಗೆ ಕೃಷಿ ಸಚಿವರ ಭರವಸೆಯಂತೆ ಸೋಮವಾರ ಹಾರ್ಟಿಕಲ್ಚರ್ ಅಧಿಕೃತರು ಖರೀದಿಸಿ ಕೊಂಡೊಯ್ದರು.
ಬೈಕುಂಜ ಶಂಕರನಾರಾಯಣ ಭಟ್ ಬೃಹತ್ ಸಂಖ್ಯೆಯಲ್ಲಿ ಬೆಳೆಸಿದ ಕುಂಬಳಕಾಯಿ ಬೆಳೆ ಲಾಕ್ ಡೌನ್ ಕಾರಣ ಮಾರಾಟಗೈಯಲಾಗದೆ ಸಂಕಷ್ಟದಲ್ಲಿರುವ ಮಾಹಿತಿ ತಿಳಿದ ರಾಜ್ಯ ಕೃಷಿ ಸಚಿವರೇ ಸ್ವತಃ ಪೋನ್ ಮೂಲಕ ಕಳೆದ ಗುರುವಾರ ಸಂಪರ್ಕಿಸಿ ಮಾರಾಟ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದ್ದರು. ಸಚಿವರು ನೀಡಿದ್ದ ಭರವಸೆ ಸೋಮವಾರ ಸಾಕಾರಗೊಂಡಿದ್ದು ಕಿಲೋಗ್ರಾಂಗೆ 17 ರೂ.ಗಳಂತೆ ಇದೀಗ ಖರೀದಿಸಿ ಭಟ್ ಅವರ ಮನೆಯಿಂದ ಸಾಗಿಸಲಾಗಿದೆ. ಕೊರೊನಾ ಲಾಕ್ ಡೌನ್ ಕಾರಣ ಮಾರುಕಟ್ಟೆ ಸ್ಥಗಿತವಾಗಿದ್ದರೂ ಒಳ್ಳೆಯ ಬೆಳೆ ಮತ್ತು ಬೆಲೆಯೂ ಸಿಕ್ಕಿದೆ ಎಂದು ಭಟ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.


