ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಿವಿಲ್ ಸಪ್ಲೈಸ್ ಇಲಾಖೆಯ ನೇತೃತ್ವದಲ್ಲಿ ವಿತರಣೆ ನಡೆಸಲಾಗುತ್ತಿರುವ ಉಚಿತ ಪಡಿತರ ವಿತರಣೆ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮೊದಲ ವಾರ ಶೇ 83.14 ವಿತರಣೆ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿರುವ 3,13,835 ಪಡಿತರ ಚೀಟಿದಾರರಲ್ಲಿ 2,60,938 ಪಡಿತರ ಚೀಟಿ ಮಾಲೀಕರು ಪಡಿತರ ಸಾಮಾಗ್ರಿ ಈಗಾಗಲೇ ಪಡೆದಿದ್ದಾರೆ. ಜೊತೆಗೆ ಕಾರ್ಡ್ ಇಲ್ಲದ ಮಂದಿ ಆಧಾರ್ ಕಾರ್ಡ್ ಬಳಸಿ ಪಡಿತರ ಸಾಮಾಗ್ರಿ ಪಡೆಯಬಹುದಾಗಿದ್ದು, ಈ ನಿಟ್ಟಿನಲ್ಲಿ 4197.75 ಮೆಟ್ರಿಕ್ ಟನ್ ಅಕ್ಕಿ, 403.55 ಮೆಟ್ರಿಕ್ ಟನ್ ಗೋಧಿ ವಿತರಣೆ ನಡೆದಿದೆ. ಏ.20 ವರೆಗೆ ರಾಜ್ಯ ಸರಕಾರದ ಉಚಿತ ಪಡಿತರ ವಿತರಣೆ ನಡೆಯಲಿದೆ. ಏ.10ರ ವೇಳೆಗೆ ಆದ್ಯತೆ ಪಟ್ಟಿಯಲ್ಲಿರುವ (ಹಳದಿ, ಪಿಂಕ್ ಕಾರ್ಡ್ ಗಳು) ಕೇಂದ್ರ ಸರಕಾರ ಮಂಜೂರು ಮಾಡಿರುವ ಅಕ್ಕಿ ವಿತರಣೆ ನಡೆಸಲಾಗುವುದು. ಈ ಪ್ರಕಾರ ಪಡಿತರ ಚೀಟಿಯಲ್ಲಿ ಹೆಸರಿರುವ ಒಬ್ಬ ವ್ಯಕ್ತಿಗೆ ತಲಾ 5 ಕಿಲೋ ಅಕ್ಕಿ ಲಭಿಸಲಿದೆ. ಈ ನಿಟ್ಟಿನಲ್ಲಿ 912 ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗಿದೆ.
ಉಚಿತ ಆಹಾರ ಧಾನ್ಯಗಳ ಕಿಟ್:
ಉಚಿತ ಪಡಿತರ ವಿತರಣೆ ಪೂರ್ಥಿಗೊಳಿಸುತ್ತಿರುವ ವೇಳೆ ರಾಜ್ಯ ಸರಕಾರ ಘೋಷಿಸಿರುವ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ಸಿದ್ಧಪಡಿಸುವ ನಿಟ್ಟಿನಲ್ಲಿ ಸಾಮಾಗ್ರಿಗಳ ಸಂಗ್ರಹ ಜಿಲ್ಲೆಯಲ್ಲಿ ಆರಂಭಗೊಂಡಿದೆ. 17 ಆಹಾರ ಸಾಮಾಗ್ರಿಗಳು ಸೇರಿರುವ ಕಿಟ್ ಈ ನಿಟ್ಟಿನಲ್ಲಿ ಸಿದ್ಧಗೊಳ್ಳಲಿದೆ. ಮೊದಲ ಹಂತದಲ್ಲಿ ಆದ್ಯತೆ ಪಟ್ಟಿಯಲ್ಲಿರುವ (ಹಳದಿ, ಪಿಂಕ್ ಕಾರ್ಡ್ ಗಳು) ವಿಭಾಗದ ಮಂದಿಗೆ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗುವುದು. ನಂತರ ಎಲ್ಲ ಕಾರ್ಡ್ ದಾರರಿಗೂ ವಿತರಣೆ ಜರುಗಲಿದೆ. ಈ ಕಿಟ್ ಗಳಿಗೆ ಅಗತ್ಯವಿರುವ ಬಟ್ಟೆ ಚೀಲಗಳು ಕುಟುಂಬಶ್ರೀ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ಸಪ್ಲೈ ಕೋ ಔಟ್ ಲೆಟ್ ಗಳ ಮೂಲಕ ಇವು ವಿತರಣೆ ಗೊಳ್ಳಲಿವೆ.
ಪಡಿತರ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜಿಲ್ಲೆಯ ಪಡಿತರ ಅಂಗಡಿಗಳು ಯಶಸ್ವಿಯಾಗಿವೆ.
ಜಿಲ್ಲೆಯಲ್ಲಿ ಆಹಾರ ಸಾಮಾಗ್ರಿಗಳ ಕ್ಷಾಮ ತಲೆದೋರದು ಎಂದು ಜಿಲ್ಲಾ ಸಪ್ಲೈ ಅಧಿಕಾರಿ ವಿ.ಕೆ.ಶಶೀಂದ್ರನ್ ತಿಳಿಸಿದರು.
ಪಡಿತರ ವಿತರಣೆಯ ತಪಾಸಣೆಗೆ ಲೀಗಲ್ ಮೆಟ್ರಾಲಜಿ ಇಲಾಖೆ ಸಕ್ರಿಯ
ಜಿಲ್ಲೆಯಲ್ಲಿ ಪಡಿತರ ವಿತರಣೆಯ ಸಮಪರ್ಪಕತೆ ತಪಾಸಣೆ ನಡೆಸುವ ನಿಟ್ಟಿನಲ್ಲಿ ಲೀಗಲ್ ಮೆಟ್ರಾಲಜಿ ಇಲಾಖೆ ಸಕ್ರಿಯವಾಗಿದೆ.
ಅಳತೆಯಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 8 ಕೇಸುಗಳು, ಕುಡಿಯುವ ನೀರಿನ ಬಟಲಿಗೆ ಅಧಿಕ ಬೆಲೆ ಈಡುಮಾಡಿದ ಆರೋಪದಲ್ಲಿ 12 ಕೇಸುಗಳು, ಸಾನಿಟೈಸರ್ ಇತ್ಯಾದಿಗಳ ಮಾರಾಟದಲ್ಲಿ ವಂಚನೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿ 8 ಕೇಸುಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಫ್ಲೈಯಿಂಗ್ ಸ್ಕ್ವಾ ಡ್ ರಂಗದಲ್ಲಿದೆ. ದೂರಗಳಿದ್ದಲ್ಲಿ ಸ್ವೀಕರಿಸಲು ನಿಯಂತ್ರಣ ಕೊಠಡಿಯೂ ಇದೆ. ದೂರವಾಣಿ ನಂಬ್ರ: 04994-255138.


