ಕಾಸರಗೋಡು: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಆದೇಶ ವೇಳೆ ಕಲ್ಯಾಣ ಪಿಂಚಣಿಗಳು ಜಿಲ್ಲೆಯಲ್ಲಿ ಮೊಟಕುಗೊಂಡಿಲ್ಲ ಎಂಬುದು ಗಮನಾರ್ಹ ವಿಚಾರ. ಖಜಾನೆಯ ಸಿಬ್ಬಂದಿ ನಡೆಸುತ್ತಿರುವ ಅವಿರತ ದುಡಿಮೆಯೇ ಇದಕ್ಕೆ ಕಾರಣ.
ಮಾ.23ರಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಂಡಿದ್ದರೂ, ರಾಜ್ಯ ಸರಕಾರದ ಎಲ್ಲ ಆದೇಶಗಳನ್ನು ಪಾಲಿಸುವ ಮೂಲಕ ಖಜಾನೆಯ ಸಿಬ್ಬಂದಿ ತಮ್ಮ ಕಾರ್ಯ ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ. ಜಾಗದ ಪರಿಮಿತಿ, ವಾಹನಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳ ನಡುವೆಯೂ ಇವರ ಕರ್ತವ್ಯ ಮೊಟಕುಗೊಂಡಿಲ್ಲ.
ರಾಜ್ಯ ಹಣಕಾಸು ಸಚಿವ ಸೂಚಿಸಿದಂತೆ ಮಾ.27ರಂದು ಸಮರ್ಪಕವಾಗಿ 2 ತಿಂಗಳ ಕಲ್ಯಾಣ ಪಿಂಚಣಿ ಮೊಬಲಗನ್ನು ಸಹಕಾರ ಬ್ಯಾಂಕ್ ಗಳ ಮೂಲಕ ನೀಡಲು ಸಾಧ್ಯವಾಗಿದೆ ಎಂಬ ಕೃತಾರ್ಥತೆಯಲ್ಲಿ ಸಿಬ್ಬಂದಿ ಇದ್ದಾರೆ. ವೃದ್ಧಾಪ್ಯ ಪಿಂಚಣಿ,ಕೃಷಿ ಕಾರ್ಮಿಕಪಿಂಚಣಿ, ಸಮಾಜ ಕಲ್ಯಾಣ ಪಿಂಚಣಿ ಇತ್ಯಾದಿಗಳ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ.
35 ಮಂದಿ ಸಿಬ್ಬಂದಿ ಉಪಜಿಲ್ಲಾ ಖಜಾನೆಯಲ್ಲಿ ಮೂರು ಶಿಫ್ಟ್ ನಲ್ಲಿ ದುಡಿಮೆ ನಡೆಯುತ್ತಿದೆ. ಸಾಧಾರಣ ಗತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಇಲಲಿ ಕಾಯನ ನಡೆದರೆ, ಈಗ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕರ್ತವ್ಯ ನಡೆಯುತ್ತಿದೆ. ಸಾಧಾರಣ ದಿನಗಳಲ್ಲಿ ದಿನವೊಂದಕ್ಕೆ 400-450 ಮಂದಿ ಇಲ್ಲಿ ಸೇವೆ ಬಯಸಿ ಬರುತ್ತಾರೆ. ಕೋವಿಡ್ 19 ಸೋಂಕಿನ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಜನಸಂದಣಿ ನಡೆಯದಂತೆ ಮಾಡುವ ನಿಟ್ಟಿನಲ್ಲಿ ಪಿಂಚಣಿದಾರರ ಸಂಘಟನೆ ಗಳ ಸಹಕಾರದೊಂದಿಗೆ ಮಾತುಕತೆ ನಡೆಸಿರುವ ಪ್ರಕಾರ ಪಿಂಚಣಿ ವಿತರಣೆ ನಡೆದಿದೆ. 20 ಮಂದಿಯ ಪಿಂಚಣಿ ಒಬ್ಬರ ಮೂಲಕ ಎಂಬ ಗಣನೆಯಲ್ಲಿ ವಿತರಣೆ ನಡೆಸಲಾಗುತ್ತಿದ್ದು, ಇದು ಯಶಸ್ವಿಯಾಗಿದೆ ಎಂದು ಜಿಲ್ಲಾ ಖಜಾನೆಯ ವರಿಷ್ಠಾಧಿಕಾರಿ ಒ.ಟಿ.ಗಫೂರ್ ತಿಳಿಸಿದರು.


